ಪುತ್ತೂರು: ತೆಂಕುತಿಟ್ಟು ಯಕ್ಷಗಾನ ಅರ್ಥಧಾರಿ, ವೇಷಧಾರಿ, ಸಂಘಟಕ, ಪುರಾಣವಾಚಕ, ರಂಗಕರ್ಮಿ ಭಾಸ್ಕರ ಬಾರ್ಯ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 120 ಸಾಧಕರಿಗೆ ಹಾಗೂ 54 ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. ಇದರಲ್ಲಿ ಪುತ್ತೂರಿನ ಭಾಸ್ಕರ ಬಾರ್ಯ ಅವರು ಒಬ್ಬರು.
ಯಕ್ಷಗಾನದಲ್ಲಿ ತಾಳಮದ್ದಳೆಗೆ ವಿಶೇಷ ಪ್ರಾಧಾನ್ಯತೆ. ಮಾತಿನ ಮಂಟಪದಿಂದಲೇ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಕಲೆ ಅರ್ಥಧಾರಿಗಳಿಗೆ ಕರತಲಾಮಲಕ. ಇಂತಹ ಅದೇಷ್ಟೋ ಯಕ್ಷ ಪ್ರಿಯರಿಗೆ ವೇದಿಕೆ ನೀಡಿ, ತಾವು ಕೂಡ ಅರ್ಥಧಾರಿಗಳಾಗಬಹುದು, ಬಣ್ಣ ಹಚ್ಚಬಹುದು ಎಂದು ಹುರಿದುಂಬಿಸಿದವರು ಭಾಸ್ಕರ ಭಾರ್ಯ.
ಹೊಸ ಪ್ರಯೋಗಗಳು:
ತಾಳಮದ್ದಳೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡವರು. ಪುತ್ತೂರಿನ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇರಿದಂತೆ ಹಲವು ಕಡೆ ನಿರಂತರವಾಗಿ ತಾಳಮದ್ದಳೆ ಆಯೋಜಿಸಿಕೊಂಡ ಬಂದಿದ್ದಾರೆ. ಇದಲ್ಲದೇ ಸಂಘದ ಮೂಲಕ ಯಕ್ಷಗಾನದಲ್ಲಿ ನವರಸ ಅಭಿನಯದ ತಾಳಮದ್ದಳೆ, ಯಕ್ಷರಾಕ್ಷಸ ಶೀರ್ಷಿಕೆಯ ಹೊಸ ಕಲ್ಪನೆಯ ತಾಳಮದ್ದಳೆ, ಯಕ್ಷ ಸಂಗೀತ ರಾಗ ವೈಭವ ಪ್ರದರ್ಶನ, ಯಕ್ಷ ದಾಂಪತ್ಯ ಎಂಬ ವಿನೂತನ ಪ್ರಯೋಗ, ಯಕ್ಷ ಯುಗಳ ಸಂವಾದ ತಾಳಮದ್ದಳೆ, ಯಕ್ಷಸಂಗೀತ, ಗಮಕ ವೈಭವ, ಯಕ್ಷಂತರಂಗ ವೈಭವ ಹೀಗೆ ಹೊಸ ಹೊಸ ಸಾಧ್ಯತೆಗಳತ್ತ ಕಣ್ಣು ಹಾಯಿಸುತ್ತಾ ಬಂದಿದ್ದಾರೆ.
ಮಹಿಳಾ ತಾಳಮದ್ದಳೆ ತಂಡದ ಗುರು:
ಕರ್ನಾಟಕ ಯಕ್ಷಗಾನಬಯಲಾಟ ಅಕಾಡೆಮಿ ಮಾಜಿ ಸದಸ್ಯರಾಗಿರುವ ಇವರು, ಕಳೆದ 15 ವರ್ಷಗಳಿಂದ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾಗಿ, ಅದಕ್ಕೂ ಮುಂಚೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ತಾಳಮದ್ದಳೆಯ ತಂಡವನ್ನು ರೂಪಿಸಿ, ಗುರು ಎನಿಸಿಕೊಂಡಿದ್ದಾರೆ.
ಕನ್ನಡದ ಪ್ರೀತಿ:
ಭಾಸ್ಕರ ಬಾರ್ಯ ಅವರ ಪದವಿ ಶಿಕ್ಷಣ ವಾಣಿಜ್ಯಶಾಸ್ತ್ರದಲ್ಲಿ ನಡೆಯಿತು. ಅದೇಕೋ ಏನೋ ಕನ್ನಡ ಭಾಷೆ ಅವರನ್ನು ಆಕರ್ಷಿಸಿತು. ಹಾಗಾಗಿ ಎಂ.ಎ.ನಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡು, ಸ್ನಾತಕೋತ್ತರ ಪದವಿ ಪಡೆದರು. ಸರಕಾರದ ವಯಸ್ಕರ ಶಿಕ್ಷಣದ ಅಧ್ಯಾಪಕನಾಗಿ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಮುಡಿಗೇರಿಸಿಕೊಂಡವರು. ಮುತ್ತಿಲ ಸರಕಾರಿ ಪ್ರೌಢಶಾಲೆಯಲ್ಲಿ 3 ವರ್ಷಗಳ ಕಾಲ ಅಧ್ಯಾಪನ ವೃತ್ತಿ ನಿರ್ವಹಿಸಿದ್ದಾರೆ. ಇದೀಗ ಸ್ವಂತ ಹಣಕಾಸು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇದೀಗ ತಮ್ಮ ಜೀವನವನ್ನು ಯಕ್ಷರಂಗದ ಸೇವೆಗೆ ಮುಡಿಪಾಗಿಟ್ಟಿದ್ದಾರೆ.
ಹಲವು ಪ್ರಶಸ್ತಿ, ಸಂಮಾನ:
ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಜಿಲ್ಲಾ ಸಂಚಾಲಕರಾಗಿರುವ ಇವರಿಗೆ ಕನ್ನಡ ರಾಜ್ಯೋತ್ಸವ ತಾಲೂಕು ಪ್ರಶಸ್ತಿ, ಯಕ್ಷಭಾರತೀ 2025ರ ವಾರ್ಷಿಕ ಪ್ರಶಸ್ತಿ, ಅಕ್ಷಯ ಗೌರವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಗೌರವ ಸಂಮಾನ, ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟಿನ ಗೌರವಗಳು ಸಂದಿವೆ.






















