ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿರುವ 80ರ ದಶಕದ ಫೋಟೋ ಎಡಿಟಿಂಗ್ ಟ್ರೆಂಡ್ ಕುರಿತು ಪೊಲೀಸರು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಟ್ರೆಂಡ್‌ನ ನೆಪದಲ್ಲಿ ಸೈಬರ್ ವಂಚಕರು ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಹಳೆಯ ಕಾಲದ ಶೈಲಿಯಲ್ಲಿ ಫೋಟೋಗಳನ್ನು ಪರಿವರ್ತಿಸಲು ಅಪರಿಚಿತ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಇಂತಹ ಅಪ್ಲಿಕೇಶನ್‌ಗಳಿಗೆ ಫೋಟೋಗಳನ್ನು ಅಪ್‌ಲೋಡ್ ಮಾಡುವುದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಅಪಾಯವಿದೆ ಎಂದು ತಿಳಿಸಿದ್ದಾರೆ.
ಸೋರಿಕೆಯಾದ ಮಾಹಿತಿಯನ್ನು ಬಳಸಿಕೊಂಡು ಸೈಬರ್ ಖದೀಮರು ಹಣಕಾಸಿನ ವಂಚನೆ ಸೇರಿದಂತೆ ವಿವಿಧ ದುಷ್ಕೃತ್ಯಗಳಿಗೆ ಮುಂದಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಜನಜಾಗೃತಿ ಸಂದೇಶವನ್ನು ಪ್ರಕಟಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಹಾಗೂ ಅಪರಿಚಿತ ಮೂಲಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕ್ಷಣಿಕ ಟ್ರೆಂಡ್‌ಗಾಗಿ ವೈಯಕ್ತಿಕ ಫೋಟೋ ಹಾಗೂ ಮಾಹಿತಿಯನ್ನು ಅಪರಿಚಿತ ವೇದಿಕೆಗಳಿಗೆ ನೀಡುವುದರಿಂದ ಅಪಾಯ ಎದುರಾಗಬಹುದು. ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರಿಕೆ ವಹಿಸಿ, ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರುವಂತೆ ಪೊಲೀಸರು ಸಲಹೆ ನೀಡಿದ್ದಾರೆ.






















