ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಹಾಗೂ ನಿಡ್ಪಳ್ಳಿ ಶ್ರೀ ಶಾಂತದುರ್ಗ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ರಾಜ್ಯ ಕಳ್ಳತನದ ಆರೋಪಿಯನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಪಡುವನ್ನೂರು ಗ್ರಾಮದ ಶ್ರೀ ಆದಿಶಕ್ತಿ ದೇವಿ ಸನ್ನಿಧಿ ಪಡುಮಲೆ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳ್ಳತನ ನಡೆದ ಪ್ರಕರಣವೂ ದಾಖಲಾಗಿತ್ತು. ಈ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು ಕೇರಳದ ಕಿನ್ನಿಗಾರು, ಬದಿಯಡ್ಕ ಹಾಗೂ ಆದೂರು ಭಾಗಗಳಲ್ಲಿ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಕೇರಳದ ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಮದಕ ಕಿನ್ನಿಗಾರ ನಿವಾಸಿ ಸತೀಶ್ (31) ಎಂಬಾತನನ್ನು ಬದಿಯಡ್ಕದಲ್ಲಿ ಬಂಧಿಸಲಾಗಿದೆ. ಆರೋಪಿಯಿಂದ ಕಳ್ಳತನ ಮಾಡಲಾಗಿದ್ದ ಕಾಣಿಕೆ ಡಬ್ಬಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಹೋಂಡಾ ಎಸ್ಪಿ ಶೈನ್ ಬೈಕ್ ಸೇರಿದಂತೆ ಅಂದಾಜು 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ವಿರುದ್ಧ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳ್ಳತನ ಪ್ರಕರಣ ದಾಖಲಾಗಿದ್ದು, ಅಡಿಕೆ ಕಳ್ಳತನ ಹಾಗೂ ದೇವಸ್ಥಾನಗಳ ಕಾಣಿಕೆ ಡಬ್ಬಿ ಕಳ್ಳತನದಲ್ಲಿ ಭಾಗಿಯಾಗುತ್ತಿದ್ದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಆದೇಶದಂತೆ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ನಿರ್ದೇಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐಗಳಾದ ಗುಣಪಾಲ್ ಜೆ. ಹಾಗೂ ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಮೇಶ್, ನಾಗರಾಜ, ಮಂಜುನಾಥ, ಆಕಾಶ್, ಕಾರ್ತಿಕ್, ಅಪರಾಧ ವಿಭಾಗದ ಶರಣಪ್ಪ ಪಾಟೀಲ್ ಹಾಗೂ ಈರಣ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಸಹಕರಿಸಿದ್ದರು.
























