ಅಪರಾಧ

ಹೆಂಡತಿಯ ಶಿರಚ್ಛೇದ ಮಾಡಿದ್ದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಾಟಿ: ಹೆಂಡತಿಯನ್ನು ಭೀಕರವಾಗಿ ಹತ್ಯೆ ಮಾಡಿ, ಆಕೆಯ ಶಿರಚ್ಛೇದ ಮಾಡಿದ ಪ್ರಕರಣದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಘಟನೆ ಅಸ್ಸಾಂನ ಗುವಾಹಾಟಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಮೃತನನ್ನು ರಾಮಾನುಜ್ ಗೋಸ್ವಾಮಿ (30) ಎಂದು ಗುರುತಿಸಲಾಗಿದೆ. ಹತಿಗಾಂವ್ ಪೊಲೀಸ್ ಠಾಣೆಯ ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಗುವಾಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಠಾಣೆಗೆ ವಾಪಸ್ ಕರೆತರುತ್ತಿದ್ದ ವೇಳೆ ನರಕಾಸುರ ಪಹಾಡ್ ಪ್ರದೇಶದ ಬಳಿ ಈ ಘಟನೆ ನಡೆದಿದೆ.

ಪೊಲೀಸ್ ವಾಹನ ಚಲಿಸುತ್ತಿದ್ದ ವೇಳೆ ರಾಮಾನುಜ್ ಏಕಾಏಕಿ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿ ವಾಹನದಿಂದ ಹೊರಗೆ ಜಿಗಿದಿದ್ದಾನೆ. ಈ ವೇಳೆ ಆತ ಆಳವಾದ ಕಂದಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪತ್ನಿಯ ಭೀಕರ ಹತ್ಯೆ

ಸೆಪ್ಟೆಂಬರ್ 3ರಂದು ರಾಮಾನುಜ್ ತನ್ನ ಪತ್ನಿ ರಿಯಾ ತಾಲುಕ್ದಾರ್ (25) ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಆಕೆಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆ ಮತ್ತು ಬೆರಳುಗಳನ್ನು ಕಪ್ಪು ಪಾಲಿಥಿನ್ ಚೀಲದಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಸೆಪ್ಟೆಂಬರ್ 6ರಂದು ರಾಮಾನುಜ್ ಪೊಲೀಸರಿಗೆ ಶರಣಾಗಿದ್ದ. ಸೆಪ್ಟೆಂಬರ್ 8ರಂದು ನಡೆದ ಸ್ಥಳ ಪರಿಶೀಲನೆ ವೇಳೆ ಹತ್ಯೆಯ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಆತ ಹೇಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಬಳಸಲಾಗಿದೆ ಎಂದು ಶಂಕಿಸಲಾದ ರಕ್ತದ ಕಲೆಗಳಿದ್ದ ಮಚ್ಚನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಘಟನೆ ನಡೆದ ಸಂದರ್ಭದಲ್ಲಿ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ರಾಮಾನುಜ್ ಹೇಳಿದ್ದ ಎನ್ನಲಾಗಿದ್ದು, ಫ್ಲ್ಯಾಟ್‌ನಲ್ಲಿ ಖಾಲಿ ಮದ್ಯದ ಬಾಟಲಿಗಳೂ ಪತ್ತೆಯಾಗಿದ್ದವು.

ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಘಟನೆಯ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 121