ಮೂಡಬಿದಿರೆ: ಭಾದ್ರಪದ ಶುಕ್ಲ ಚತುರ್ಥಿಯಂದು ಆಚರಿಸಲಾಗುವ ಗಣೇಶ ಚತುರ್ಥಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಗೌರಿ-ಗಣೇಶ ಹಬ್ಬ ಎಂದೂ ಕರೆಯಲ್ಪಡುವ ಈ ಸಂದರ್ಭದಲ್ಲಿ ವಿಘ್ನನಿವಾರಕ ಗಣೇಶನನ್ನು ವಿಧಿವಿಧಾನಗಳೊಂದಿಗೆ ಆರಾಧಿಸಲಾಗುತ್ತದೆ. ಗಣೇಶನ ಆರಾಧನೆಯಿಂದ ಸುಖ, ಶಾಂತಿ, ಸಮೃದ್ಧಿ ಹಾಗೂ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ಗಣೇಶನನ್ನು ಸ್ಮರಿಸುವುದು ವಾಡಿಕೆ. ಬುದ್ಧಿವಂತಿಕೆ, ಸಮೃದ್ಧಿ ಹಾಗೂ ಅದೃಷ್ಟದ ದೇವರೆಂದು ಗಣೇಶನನ್ನು ಪೂಜಿಸಲಾಗುತ್ತದೆ. ಮಣ್ಣಿನಿಂದ ಅಥವಾ ಬೆಳ್ಳಿಯಿಂದ ತಯಾರಿಸಿದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವ್ರತ ಹಾಗೂ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ.
ಸೆ.14ರಂದು ಗೌರಿ-ಗಣೇಶ ಹಬ್ಬ
ಈ ವರ್ಷ ಗೌರಿ-ಗಣೇಶ ಹಬ್ಬವನ್ನು ಸೆ.14ರಂದು ಆಚರಿಸಲಾಗುತ್ತಿದೆ. ಚತುರ್ಥಿ ತಿಥಿಯು ಸೆ.14ರ ಬೆಳಗ್ಗೆ 7.06ಕ್ಕೆ ಆರಂಭವಾಗಿ ಸೆ.15ರ ಬೆಳಗ್ಗೆ 7.44ಕ್ಕೆ ಮುಕ್ತಾಯವಾಗಲಿದೆ. ಗಣೇಶೋತ್ಸವವು ಸಾಮಾನ್ಯವಾಗಿ ಭಾದ್ರಪದ ಶುಕ್ಲ ಚತುರ್ಥಿಯಿಂದ ಆರಂಭವಾಗಿ ಅನಂತ ಚತುರ್ದಶಿಯವರೆಗೆ ವಿವಿಧೆಡೆ ವಿವಿಧ ಅವಧಿಯಲ್ಲಿ ನಡೆಯುತ್ತದೆ.
ಪೂಜೆಗೆ ಮುನ್ನ ಮನೆಯ ಸ್ವಚ್ಛತೆ
ಗಣೇಶ ಮೂರ್ತಿಯನ್ನು ಮನೆಗೆ ತರುವ ಮುನ್ನ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದು ಸಂಪ್ರದಾಯವಾಗಿದೆ. ಮನೆಯ ಮುಖ್ಯದ್ವಾರಕ್ಕೆ ಮಾವಿನ ಎಲೆಯ ತೋರಣ ಕಟ್ಟಿ, ಧೂಪ-ದೀಪಗಳಿಂದ ಅಲಂಕರಿಸಿ ಗಣೇಶನನ್ನು ಸ್ವಾಗತಿಸಲಾಗುತ್ತದೆ.
ಹಬ್ಬದ ದಿನ ಮೋದಕ, ಕಡುಬು, ಪಂಚಭಕ್ಷ್ಯಗಳು, ಪಾಯಸ, ವಿವಿಧ ಸಿಹಿತಿಂಡಿಗಳು ಸೇರಿದಂತೆ ಹಲವು ಬಗೆಯ ನೈವೇದ್ಯಗಳನ್ನು ತಯಾರಿಸಿ ಗಣೇಶನಿಗೆ ಅರ್ಪಿಸಲಾಗುತ್ತದೆ. ಕರಾವಳಿ ಭಾಗದಲ್ಲಿ ಮೂಡೆ, ಪತ್ರೊಡೆ, ರೊಟ್ಟಿ ಸೇರಿದಂತೆ ಸ್ಥಳೀಯ ಸಾಂಪ್ರದಾಯಿಕ ಖಾದ್ಯಗಳನ್ನೂ ನೈವೇದ್ಯವಾಗಿ ಸಮರ್ಪಿಸುವ ಪದ್ಧತಿ ಇದೆ.
ಗಣೇಶ ಮೂರ್ತಿಯ ಆಯ್ಕೆಯಲ್ಲೂ ಸಂಪ್ರದಾಯ
ಮನೆಗಳಲ್ಲಿ ಪೂಜೆಗೆ ಗಣೇಶನ ಸ್ಥಿರವಾಗಿ ಕುಳಿತಿರುವ ಮೂರ್ತಿಯನ್ನು ಆಯ್ಕೆ ಮಾಡುವುದು ಉತ್ತಮ ಎಂಬ ನಂಬಿಕೆ ಇದೆ. ಸೊಂಡಿಲು ಎಡಭಾಗಕ್ಕೆ ತಿರುಗಿರುವ ಗಣೇಶನನ್ನು ವಾಮಮುಖಿ ಗಣಪತಿ ಎಂದು ಕರೆಯಲಾಗುತ್ತದೆ. ಇಂತಹ ಮೂರ್ತಿಯ ಪೂಜೆ ಸರಳ ಹಾಗೂ ಶಾಂತ ಸ್ವರೂಪದ ಆರಾಧನೆಗೆ ಸೂಕ್ತವೆಂದು ನಂಬಲಾಗುತ್ತದೆ.
ಬಲಭಾಗಕ್ಕೆ ಸೊಂಡಿಲು ತಿರುಗಿರುವ ಗಣಪತಿಯನ್ನು ಸಿದ್ಧಿವಿನಾಯಕ ಎಂದು ಕರೆಯಲಾಗುತ್ತದೆ. ಇಂತಹ ಗಣಪತಿಯ ಪೂಜೆಯಲ್ಲಿ ನಿತ್ಯನಿಯಮಗಳು ಹಾಗೂ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ನಂಬಿಕೆಯೂ ಇದೆ.
ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದು ಶುಭಕರ ಎಂಬ ಧಾರ್ಮಿಕ ನಂಬಿಕೆ ಇದೆ.
21 ಮನೆಗಳಿಗೆ ಭೇಟಿ ನೀಡುವ ಸಂಪ್ರದಾಯ
ಗಣೇಶ ಚತುರ್ಥಿಯಂದು 21 ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಗಳನ್ನು ದರ್ಶನ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ಹಲವರು 21 ಮನೆಗಳಿಗೆ ತೆರಳಿ ಗಣೇಶನಿಗೆ ಅಕ್ಷತೆ ಅರ್ಪಿಸಿ ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ಪಾಲಿಸುತ್ತಾರೆ.
ದೇಶದ ವಿವಿಧೆಡೆ ಸಾರ್ವಜನಿಕವಾಗಿ ಗಣೇಶೋತ್ಸವವನ್ನು 3, 5, 9, 11 ಅಥವಾ 21 ದಿನಗಳ ಕಾಲ ಆಚರಿಸಿ ಬಳಿಕ ಗಣೇಶ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
ಗಣೇಶ ಚತುರ್ಥಿಯ ಆಚರಣೆಯು ಧಾರ್ಮಿಕ ನಂಬಿಕೆ, ಭಕ್ತಿ, ಸಂಪ್ರದಾಯ ಹಾಗೂ ಸಾಮಾಜಿಕ ಒಗ್ಗಟ್ಟಿನ ಸಂಕೇತವಾಗಿ ದೇಶಾದ್ಯಂತ ವೈಭವದಿಂದ ನಡೆಯುತ್ತದೆ.
– ಎಂ. ಬಾಲಕೃಷ್ಣ ನಾಯಕ್, ಮೂಡಬಿದಿರೆ (ದ.ಕ.)




















