ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಸೆ.12ರಂದು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವು ಉಮಾಮಹೇಶ್ವರ ಮಹಿಳಾ ಭಜನಾ ತಂಡ ಹಾಗೂ ಮಲೆಂಗಲ್ಲು ಭಜನಾ ಮಂಡಳಿಯ ಭಜನೆಯೊಂದಿಗೆ ಆರಂಭಗೊಂಡಿತು. ಬಳಿಕ ಶ್ರೀ ವಿನೋದ ಆರ್. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಹಿಳೆಯರು, ಪುರುಷರು, ಮಕ್ಕಳು ಹಾಗೂ ಅಂಗನವಾಡಿ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ಪುಟಾಣಿ ಮಕ್ಕಳಿಗಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮೂವರು ಸಾಧಕರನ್ನು ಸನ್ಮಾನಿಸಲಾಯಿತು. ದೇಶೀಯ ತಳಿ ಹೈನುಗಾರಿಕೆ ಹಾಗೂ ಪ್ರಗತಿಪರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಭೋಜ ಶೆಟ್ಟಿ ಪಣೆಕ್ಕರ, ಕಳೆದ 32 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಕಟೀಲು ಮೇಳದ ಪ್ರಸಿದ್ಧ ಕಲಾವಿದರಾಗಿರುವ ಸುನಿಲ್ ಭಂಡಾರಿ ಹಾಗೂ ಕಳೆದ 16 ವರ್ಷಗಳಿಂದ ವಿಕಲಚೇತನ ಮಕ್ಕಳ ವಿಶೇಷ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ, ಪ್ರಸ್ತುತ ಕಣಿಯೂರು ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಜಾತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಪಿಲಿಗೂಡು ಧರ್ಮದರ್ಶಿ ಪದ್ಮನಾಭ ಶಿಲ್ಪಿ ಅವರು ಸಾಧಕರನ್ನು ಸನ್ಮಾನಿಸಿದರು.
ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಮಲೆಂಗಲ್ಲು, ಕಾರ್ಯದರ್ಶಿ ಶರತ್ ಮೂರ್ಜಾಲು, ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅಡೆಂಜ ಹಾಗೂ ಪ್ರಶಾಂತ್ ಗೌಡ ಉರುಂಬುತ್ತಿಮಾರು, ಕೋಶಾಧಿಕಾರಿ ಕೃಷ್ಣ ನಾಯ್ಕ ವಳಬಾವು, ಕ್ರೀಡಾ ಸಂಚಾಲಕ ಸುನಿಲ್ ಮದಕ, ಯಶವಂತ ಬೊಳ್ಳರಮಜಲು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಹಾಗೂ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.




















