ಪುತ್ತೂರು: ನೆಹರು ನಗರದ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ 45ನೇ ವರ್ಷದ ಗಣೇಶೋತ್ಸವವನ್ನು ಸೆ.14ರಿಂದ 16ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುವುದು.
ಸೆ.14ರಂದು ಬೆಳಗ್ಗೆ ಶಿವಪೇಟೆಯಿಂದ ಗಣೇಶ ವಿಗ್ರಹವನ್ನು ಮೆರವಣಿಗೆಯಲ್ಲಿ ವಿವೇಕಾನಂದ ಕ್ಯಾಂಪಸ್‌ನ ಕೇಶವ ಸಂಕಲ್ಪ ಸಭಾಭವನಕ್ಕೆ ತರಲಾಗುವುದು. ಬಳಿಕ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ನಿವೃತ್ತ ಉದ್ಯೋಗಿ ನಾರಾಯಣ ಕೆ. ಜ್ಯೋತಿ ಬೆಳಗಿಸಲಿದ್ದಾರೆ.
ಮೂರು ದಿನಗಳ ಕಾಲ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ಅಂಗಸಂಸ್ಥೆಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮಸ್ಥರಿಂದ ಭಜನೆ ಹಾಗೂ ರಂಗಪೂಜೆ ನಡೆಯಲಿದ್ದು, ವಿವೇಕಾನಂದ ಕಾಲೇಜಿನ ಅಧ್ಯಾಪಕರ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸೆ.15ರಂದು ವಿವಿಧ ಕಾರ್ಯಕ್ರಮ
ಸೆ.15ರಂದು ಬೆಳಗ್ಗೆ ಗಣಪತಿ ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಣೇಶೋತ್ಸವದ ಅಂಗವಾಗಿ ಪ್ರತಿವರ್ಷ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗುವ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡದ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಭಾಗವಹಿಸಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಕಾರ್ಯದರ್ಶಿ ವಿಜಯ ನಾರಾಯಣ ಕೆ.ಎಂ. ಉಪಸ್ಥಿತರಿರಲಿದ್ದಾರೆ.
ಸೆ.16ರಂದು ಶೋಭಾಯಾತ್ರೆ, ಗಣೇಶ ವಿಸರ್ಜನೆ
ಗಣೇಶೋತ್ಸವದ ಕೊನೆಯ ದಿನವಾದ ಸೆ.16ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಗಣಪತಿಯ ವೈಭವಪೂರಿತ ಶೋಭಾಯಾತ್ರೆ ನಡೆಯಲಿದ್ದು, ಬಳಿಕ ಹಾರಡಿಯ ಬಾವಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ನೆರವೇರಲಿದೆ.
ಈ ಬಾರಿಯ 45ನೇ ಗಣೇಶೋತ್ಸವದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಹೊಸದಾಗಿ ಆರಂಭಿಸಿರುವ ಸ್ವಯಂ ಆರತಿ ವಿಶೇಷ ಆಕರ್ಷಣೆಯಾಗಲಿದೆ. ಇದರೊಂದಿಗೆ ರಂಗಪೂಜೆ, ಸರ್ವಸೇವೆ, ಮಹಾಪೂಜೆ, ಗಣಪತಿ ಹವನ, ಹರಕೆ ಸೇವೆ, ಪಂಚಕಜ್ಜಾಯ, ವಿದ್ಯಾರಕ್ಷೆ ಹಾಗೂ ಕರ್ಪೂರಾರತಿ ಸೇವೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.






















