ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ಅವ್ಯವಸ್ಥೆಗಳು ಆಗುತ್ತಿದ್ದು, ಹಣಕಾಸಿನ ವಿಷಯದಲ್ಲಿ ಅವ್ಯವಹಾರ ಕಂಡುಬರುತ್ತಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಕುಮಾರ್ ಜೈನ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಅಮಾನತಿನಲ್ಲಿಟ್ಟು ಧಾರ್ಮಿಕ ದತ್ತಿ ಇಲಾಖೆ ಕೂಡಲೇ ಅವ್ಯವಹಾರವನ್ನು ತನಿಖೆ ಮಾಡಬೇಕು. ದೇವರ ಭೂಮಿಯ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಯವರು ಇದ್ದು ತನಿಖೆಯಾಗಬೇಕು. ಹಾಗೂ ಕಾರ್ಯ ನಿರ್ವಹಣಾಧಿಕಾರಿಯವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಒಂದು ವಾರದೊಳಗೆ ಇದನ್ನು ಮಾಡದಿದ್ದಲ್ಲಿ ಸೆಪ್ಟಂಬರ್ 21ರಂದು ಭಕ್ತರ ಬೃಹತ್ ಸಭೆಯನ್ನು ಜನಾಂದೋಲನದ ಮುಖಾಂತರ ಮಾಡಲಾಗುವುದು ಎಂದರು.
2025ರಿಂದ 2026 ಜುಲೈಯವರೆಗೆ ನಡೆದ ಆಡಳಿತ ಮಂಡಳಿ ಅಥವಾ ಅಭಿವೃದ್ಧಿ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಕಾರ್ಯ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ದೇವಸ್ಥಾನದ ದೇವರ ದುಡ್ಡು ಭಕ್ತರ ಕಾಣಿಕೆ ಹಾಗೂ ದುರುಪಯೋಗ ಮಾಡುತ್ತಿದ್ದಾರೆ. ಎನ್ನುವುದಕ್ಕೆ 2025ರ ದೇವಸ್ಥಾನದ ಆಡಿಟ್ ರಿಪೋರ್ಟು ಮತ್ತು ಲೆಕ್ಕಪತ್ರಗಳೇ ಸಾಕ್ಷಿ.
ಹಲವು ಮನೆ ಮತ್ತು ಅಂಗಡಿಗಳು, ನಾಗನಕಟ್ಟೆ, ನವಗ್ರಹ ಗುಡಿ, ಅಯ್ಯಪ್ಪನ ಗುಡಿ, ನಟರಾಜ ವೇದಿಕೆ ಇನ್ನೂ ತೆಗೆಯಲ್ಪಡುವ ಮಹಾಲಿಂಗೇಶ್ವರ ಸಭಾಂಗಣ ಕಟ್ಟಡ ಇದು ಯಾವುದನ್ನೂ ತೆರವು ಮಾಡುವಾಗ ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಕಮಿಟಿ ನಿರ್ಣಯ ಲೋಕೋಪಯೋಗಿ ಇಲಾಖೆಯಿಂದ ಮೌಲ್ಯಮಾಪನ ಮಾಡಲಿಲ್ಲ ಮತ್ತು ಜೆ.ಸಿ.ಬಿ. ಹಿಟಾಚಿ, ಟಿಪ್ಪರ್ ಕೆಲಸವನ್ನು ಮಾಡಲು ಯಾವುದೇ ಟೆಂಡರ್ ಕರೆಯಲಿಲ್ಲ ಎಂದರು.
ಹರಿಪ್ರಸಾದ್ ನೆಲ್ಲಿಕಟ್ಟೆ ಮಾತನಾಡಿ, ಪ್ರತಿ ಬಾರಿ ಅಷ್ಟಮಂಗಲ ಪ್ರಶ್ನೆ ಇಟ್ಟು ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ, ದೇವರ ಗುಡಿಗಳ ಶಿಫ್ಟ್ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ನಂತರದಲ್ಲಿ ಇನ್ನೊಂದು ಪ್ರಶ್ನೆ ಇಟ್ಟಾಗ ಅದು ಸರಿಯಲ್ಲ ಎಂದು ಹೇಳಿ, ಹೊಸದಾಗಿ ಇನ್ನೊಂದು ಯೋಜನೆಯನ್ನು ರೂಪಿಸುತ್ತಿದ್ದಾರೆ. ಹೀಗೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಗಾಗಿ ಮುಂದೆ ಭಕ್ತರ ಸಭೆ ಕರೆಯಬೇಕು. ಮಾತ್ರವಲ್ಲ ಬ್ರಾಹ್ಮಣೇತರರನ್ನು ಅಷ್ಟಮಂಗಲ ಪ್ರಶ್ನೆಗೆ ಕರೆದು, ಚಿಂತನೆ ನಡೆಯಬೇಕಾಗಿದೆ. ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿ ಅವರು ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಬಾಲಚಂದ್ರ ಸೊರಕೆ, ಅನಿಲ್ ಕುಮಾರ್ ಕರ್ನನ್ನೂಜಿ, ರತ್ನಾ ಕೆ. ನಾಯರ್, ರಾಜೇಶ್ ಉಪಸ್ಥಿತರಿದ್ದರು.























