ಉಜಿರೆ: ಪಂಚೇಂದ್ರಿಯಗಳ ಆರೋಗ್ಯ ಹಾಗೂ ಬಲವರ್ಧನೆಗೆ ಪಾರಂಪರಿಕ ಆಯುರ್ವೇದ ಪದ್ಧತಿ ಸಹಕಾರಿಯಾಗಿದ್ದು, ಆಯುರ್ವೇದದ ಸೂಕ್ತ ಬಳಕೆಯ ಮೂಲಕ ಆರೋಗ್ಯಕರ ಜೀವನ ನಡೆಸಬಹುದು ಎಂದು ಕೇಂದ್ರ ಸರ್ಕಾರದ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಪರಿಷತ್ ಅಧ್ಯಕ್ಷೆ ವೈದ್ಯ ಮನೀಷಾ ಕೋಟೆಕಾರ್ ಹೇಳಿದರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಆಪ್ತಾಸ್ ಆಯುರ್ವೇದ ಟ್ರಸ್ಟ್‌ನ ದಶಮಾನೋತ್ಸವದ ಅಂಗವಾಗಿ ಇಂದ್ರಿಯ ಆರೋಗ್ಯದ ಕುರಿತು ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸಮಾವೇಶ **‘ಪುನರ್ವಸು’**ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಹದ ಪಂಚೇಂದ್ರಿಯಗಳು ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ಪಂಚೇಂದ್ರಿಯಗಳ ಬಲವರ್ಧನೆಯೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಪ್ರಕೃತಿ ಹಾಗೂ ಪರಿಸರಕ್ಕೂ ನಮ್ಮ ಬದುಕಿಗೂ ನಿಕಟ ಸಂಬಂಧವಿದೆ. ಆದರೆ ಪ್ರಗತಿಯ ನೆಪದಲ್ಲಿ ಪ್ರಕೃತಿಯಿಂದ ದೂರ ಸರಿದು ಪರಿಸರಕ್ಕೆ ಹಾನಿ ಮಾಡುತ್ತಿರುವುದು ಇಂದು ಹಲವು ರೋಗಗಳು ಹರಡಲು ಕಾರಣವಾಗುತ್ತಿದೆ ಎಂದು ಮನೀಷಾ ಕೋಟೆಕಾರ್ ಹೇಳಿದರು.
ವೈದ್ಯರು ನಿರಂತರ ಕಲಿಕೆ, ಅಧ್ಯಯನ ಮತ್ತು ಸಂಶೋಧನೆಯ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೌಶಲ, ಉತ್ತಮ ಸಂವಹನ, ಅನುಕಂಪ, ಸಹಾನುಭೂತಿ ಹಾಗೂ ನೈತಿಕತೆಯಿಂದ ರೋಗಿಗಳ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಆಯುರ್ವೇದ ಜೀವನಶೈಲಿಯಿಂದ ಆರೋಗ್ಯ ಮತ್ತು ನೆಮ್ಮದಿ: ವೀರೇಂದ್ರ ಹೆಗ್ಗಡೆ
ಇಂದ್ರಿಯ ಆರೋಗ್ಯ ಅಭಿಯಾನದ ಲೋಗೊ ಅನಾವರಣಗೊಳಿಸಿ, ‘ಚೋಟಾ ಚರಕ’ ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೈನಂದಿನ ಜೀವನದಲ್ಲಿ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಆಯುಷ್ಯ ವೃದ್ಧಿಯೊಂದಿಗೆ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಬಹುದು ಎಂದರು.
ಪಂಚೇಂದ್ರಿಯಗಳ ನಿಯಂತ್ರಣದಿಂದ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ. ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಗಳ ಮೂಲಕ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸಾ ಸೇವೆ ನೀಡುವ ಮೂಲಕ ಆಯುರ್ವೇದ ಪದ್ಧತಿಯನ್ನು ಜನಪ್ರಿಯಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಐದು ವರ್ಷಗಳ ಇಂದ್ರಿಯ ಆರೋಗ್ಯ ಅಭಿಯಾನ
ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ವೈದ್ಯ ಡಾ. ಶರದ್‌ಕುಮಾರ್ ಎಂ. ಅವರು ಇಂದ್ರಿಯ ಆರೋಗ್ಯ ಅಭಿಯಾನದ ಕುರಿತು ಮಾಹಿತಿ ನೀಡಿದರು.
ದೇಶದಲ್ಲಿರುವ ಸುಮಾರು 600 ಆಯುರ್ವೇದ ಕಾಲೇಜುಗಳ ಆಶ್ರಯದಲ್ಲಿ ಮುಂದಿನ ಐದು ವರ್ಷಗಳ ಕಾಲ ಪ್ರತಿವರ್ಷ ಒಂದು ಗ್ರಾಮವನ್ನು ದತ್ತು ಪಡೆದು, ಅಲ್ಲಿ 500 ಮಂದಿ ಸ್ವಯಂಸೇವಕರ ಮೂಲಕ ಆಯುರ್ವೇದದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈ ವಿನೂತನ ಅಭಿಯಾನ ಧರ್ಮಸ್ಥಳದಿಂದಲೇ ಆರಂಭಗೊಳ್ಳುತ್ತಿದೆ ಎಂದು ತಿಳಿಸಿದರು.
ಆಯುಷ್ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ ಶುಭಾಶಂಸೆ ನೀಡಿ, ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ ಶಿಬಿರಗಳನ್ನು ಆಯೋಜಿಸಿ ಜನರಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು. ಈ ಸೇವಾ ಕಾರ್ಯಗಳ ಸಮರ್ಪಕ ದಾಖಲೀಕರಣಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಆಯುಕ್ತ ಡಾ. ಸುನಿಲ್ ಪನ್ವಾರ್ ಮಾತನಾಡಿ, ಆಯುರ್ವೇದ ವೈದ್ಯರು ಪಾರಂಪರಿಕ ವೈದ್ಯ ಪದ್ಧತಿಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿ ಎಲ್ಲೆಡೆ ಆಯುರ್ವೇದವನ್ನು ಜನಪ್ರಿಯಗೊಳಿಸಬೇಕು. ಸಾರ್ವಜನಿಕರಿಂದಲೂ ಆಯುರ್ವೇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ‘ಗುರುವಂದನ’ ವಿಭಾಗದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಲಾಯಿತು























