ಕರಾವಳಿ

ಹಿಂದೂಗಳ ತಾಳ್ಮೆ ದೌರ್ಬಲ್ಯವಲ್ಲ: ಪುತ್ತೂರು ಚಲೋದ ಸಭಾ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಿಂದೂಗಳ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ದರ್ಬೆಯಲ್ಲಿ ಅಂಗಡಿಯವರ ಮೇಲೆ ಹಲ್ಲೆ ಮಾಡಿದವರಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದವರಿದ್ದಾರೆ. ಅವರನ್ನು ಗೂಂಡಾ ಕಾಯಿದೆಯಡಿಯಲ್ಲಿ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದರು.

puttur_chalo

ಪುತ್ತೂರಿನ ದರ್ಬೆಯಲ್ಲಿ ಆ. 21ರಂದು ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಆಪಾದಿಸಿ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಸೋಮವಾರ ಪುತ್ತೂರಿನಲ್ಲಿ ನಡೆದ ಪುತ್ತೂರು ಚಲೋ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೂಗಳ ಮೇಲೆ ದಾಳಿ ನಡೆಸುವುದು, ಪ್ರಶ್ನಿಸಲು ನಿಂತ ಹಿಂದೂ ಸಂಘಟನೆಗಳನ್ನು ದಮನಿಸಲು ಪ್ರಯತ್ನಿಸುವುದು. ಇದಕ್ಕೆ ಬಳಕೆಯಾಗುತ್ತಿರುವುದು ಪೊಲೀಸ್ ರಾಜ್. ಪೊಲೀಸ್ ರಾಜ್ ನಿಲ್ಲುವವರೆಗೂ ಹೋರಾಟ ಮುಂದುವರಿಸುತ್ತೇವೆ. ಲಾಠಿ, ಬೂಟು, ಕೋರ್ಟ್, ಕೇಸು ಇದಕ್ಕೆಲ್ಲ ಬಗ್ಗುವವರು ನಾವಲ್ಲ. ಇದೆಲ್ಲ ನಮ್ಮ ಜೀವನದ ಭಾಗವಾಗಿಯೇ ಬಂದಿದೆ ಎಂದರು.
ತಿಂಗಳಿಗೊಂದು ಚಲೋ:
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ನಾಯಕರಿಗೆ ಬಕೆಟ್ ಹಿಡಿಯುವ ಆಸೆಯಲ್ಲಿದ್ದರೆ ಯೂನಿಫಾರ್ಮ್ ಕಳಚಿಬಿಡಿ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಗಳನ್ನು ದಮನಿಸಲು ಪೊಲೀಸರನ್ನು ಛೂ ಬಿಡುವ ಕೆಲಸ ನಡೆಯುತ್ತಿದೆ. ಇದೆಲ್ಲ ನಿಲ್ಲುವವರೆಗೆ ಜಿಲ್ಲೆಯಲ್ಲಿ ತಿಂಗಳಿಗೊಂದು ಚಲೋ ನಡೆಸಲಾಗುವುದು ಎಂದವರು ಎಚ್ಚರಿಸಿದರು.
ದಂಡ ಕಟ್ಟಿದರೂ ಮಾತು ನಿಲ್ಲಿಸದ ಪ್ರಿಯಾಂಕ್ ಖರ್ಗೆ:
ಆರೆಸ್ಸೆಸ್ ವಿರುದ್ಧ ಮಾತನಾಡುವ ಸಚಿವ ಪ್ರಿಯಾಂಕ ಖರ್ಗೆ ಇದೇ ಆರೆಸ್ಸೆಸ್ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತೆರಳಿ ದಂಡ ಕಟ್ಟಿ ಬಂದಿದ್ದಾರೆ. ಆದರೂ ಸಂಘದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿಲ್ಲ. ಪುತ್ತೂರು ದರ್ಬೆ ಪ್ರಕರಣದಲ್ಲಿ ಹಲ್ಲೆ ಮಾಡಿದ ಆರೋಪಿಗಳು ರಾಜಾ ರೋಷವಾಗಿ ತಿರುಗುತ್ತಿದ್ದಾರೆ. ಹಲ್ಲೆಗೆ ಒಳಗಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜತೆಗೆ ಕೇಸಿಗೂ ತುತ್ತಾಗಿದ್ದಾರೆ. ಇದೆಂಥ ನ್ಯಾಯ?
ವ್ಯವಸ್ಥಿತ ದಾಳಿ: ಡಾ. ಕೃಷ್ಣಪ್ರಸನ್ನ

ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ದರ್ಬೆಯಲ್ಲಿ ನಡೆದಿದ್ದು ಬಿಡಿ ಘಟನೆಯಲ್ಲ. ಹಿಂದೂಗಳ ಮೇಲಿನ ವ್ಯವಸ್ಥಿತ ದಾಳಿ ಎಂದರು.

ನ್ಯಾಯಕ್ಕಾಗಿ ಬೇಡುವ ಸ್ಥಿತಿ: ಮೋಹನ್ ದಾಸ್ ಕಾಣಿಯೂರು

ಹಿಂದೂ ಜಾಗರಣ ವೇದಿಕೆಯ ಮುಖಂಡ ಮೋಹನ್‌ದಾಸ್ ಕಾಣಿಯೂರು ಮಾತನಾಡಿ, ಕಾನೂನಿನ ನ್ಯಾಯಕ್ಕಾಗಿ ಬೇಡುವ ಸ್ಥಿತಿ ಬಂದಿದೆ. ನ್ಯಾಯ ಸಿಗುವವರೆಗೆ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದರು.

ಬಜರಂಗ ದಳದ ಮುಖಂಡ ಪುನೀತ್ ಅತ್ತಾವರ ವೇದಿಕೆಯಲ್ಲಿದ್ದರು. ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಧರ ತೆಂಕಿಲ ವಂದಿಸಿದರು. ವಿಶಾಖ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆಯಿಂದ ನಗರದ ಮುಖ್ಯರಸ್ತೆಯಲ್ಲಿ ಜಾಥಾ ನಡೆಯಿತು. ಪುತ್ತೂರು ಚಲೋ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು, ರಾಜಕೀಯ ಮುಖಂಡರು ಭಾಗವಹಿಸಿದರು.
ಬೆಳಗ್ಗೆ 10.30ಕ್ಕೆ ದರ್ಬೆ ಸಮೀಪದ ಪ್ರವಾಸಿ ಮಂದಿರದ ಬಳಿಯಿಂದ ಚಲೋ ಕಾರ್ಯಕ್ರಮ ಆರಂಭಗೊಂಡಿತು. ಭಾರತ ಮಾತೆಗೆ ಜೈಕಾರ ಹಾಕುತ್ತಾ, ಪೊಲೀಸರು ಮತ್ತು ಸರಕಾರಕ್ಕೆ ದಿಕ್ಕಾರ ಕೂಗುತ್ತಾ ಕಾರ್ಯಕರ್ತರು ಕೇಸರಿ ಧ್ವಜ ಹಿಡಿದುಕೊಂಡು ಮುಖ್ಯ ರಸ್ತೆಯಲ್ಲಿ ಸಾಗಿದರು. ಕಾಲ್ನಡಿಗೆ ಜಾಥಾವು ದರ್ಬೆಯಿಂದ, ಕಲ್ಲಾರೆ, ಗಾಂಧಿ ಕಟ್ಟೆ, ಹಳೆ ಅಂಚೆ ಕಚೇರಿ ಮೂಲಕ ಸಾಗಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ಸಮಾವೇಶಗೊಂಡಿತು. ಟ್ರಕ್‌ನಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ವೇದಿಕೆಯಲ್ಲಿ ಮುಖಂಡರು ಭಾಷಣ ಮಾಡಿದರು.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸುಳ್ಯದ ಇಬ್ಬರ ಸಾವು ಪ್ರಕರಣ: ಅನಧಿಕೃತವಾಗಿ ವಿದ್ಯುತ್ ಅಳವಡಿಸಿದ್ದ ತೋಟದ ಮಾಲಕರ ವಿರುದ್ಧ ಪ್ರಕರಣ ದಾಖಲು!!

ಸುಳ್ಯ: ವಿದ್ಯುತ್ ಪ್ರವಹಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ತೋಟದ ಮಾಲಕರ ವಿರುದ್ಧ ಬೆಳ್ಳಾರೆ…