ಪುತ್ತೂರು: ರಾಜ್ಯದಲ್ಲೇ ಮೊದಲ ಕಾರ್ಯಕ್ರಮವಾಗಿ ಆಗಸ್ಟ್ 7ರಂದು ಪುತ್ತೂರಿನಲ್ಲಿ ನಡೆಯಲಿರುವ ತಿರಂಗಾ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 7ರ ಶುಕ್ರವಾರ ಸಂಜೆ 3 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ತಿರಂಗಾ ಯಾತ್ರೆ ಹೊರಡಲಿದೆ. ರಾಷ್ಟ್ರಧ್ವಜ ಹಿಡಿದು ಸಾಗುವ ಬೃಹತ್ ಯಾತ್ರೆ ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಎಲ್ಲಾ ಹಿರಿಯರ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಮಂಗಳೂರು ದಕ್ಷಿಣದಲ್ಲೂ ತಿರಂಗಾ ಯಾತ್ರೆ:
ನಿಷ್ಕಲ್ಮಶ ಮನಸ್ಸಿನಿಂದ ಬದುಕಬೇಕೆಂಬ ಸಂಕಲ್ಪ ಹಾಗೂ ನಡುವಿನಲ್ಲಿ ಧರ್ಮಚಕ್ರ. ಇದು ನಮ್ಮ ರಾಷ್ಟ್ರಧ್ವಜ. ದೇಶಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 10ರಿಂದ 15ರವರೆಗೆ ರಾಜ್ಯದ ವಿವಿಧೆಡೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಲ್ಲಿ ಮೊದಲ ಕಾರ್ಯಕ್ರಮ ಪುತ್ತೂರಿನಲ್ಲಿ ಮೂಡಿಬರಲಿದೆ. ಮಂಗಳೂರು ದಕ್ಷಿಣದಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ. ಜಿಲ್ಲೆಗೆ, ರಾಜ್ಯಕ್ಕೆ ಶಕ್ತಿ ತುಂಬಿದ ಊರು ಪುತ್ತೂರು. ಅಟಲ್ ವಿರಾಸತ್ ನಂತೆ ರಾಜ್ಯಕ್ಕೆ ಸಂದೇಶ ಕೊಡುವ ಕಾರ್ಯಕ್ರಮ ಇಲ್ಲಾಗಲಿದೆ ಎಂದು ವಿವರಿಸಿದರು.
ಜೈ ಜವಾನ್, ಜೈ ಕಿಸಾನ್:
ದೇಶಭಕ್ತಿಯನ್ನು ಉದ್ಧೀಪನ ಮಾಡುವ ಕೆಲಸವನ್ನು ಮೋದಿ ಮಾಡಿದ್ದಾರೆ. ಅದೇಷ್ಟೋ ಮಂದಿ ಸರಳ್ ಆ್ಯಪ್ ನಲ್ಲಿ ಸೆಲ್ಫಿ ತೆಗೆದು ಅಪ್ ಲೋಡ್ ಮಾಡಿದ್ದಾರೆ. ಈ ಬಾರಿಯ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮೂರು ದಿನ ರಾಷ್ಟ್ರಧ್ವಜ ಹಾರಿಸಿ, ಅದರ ಜೊತೆಗೆ ಸೆಲ್ಫೀ ತೆಗೆದು ಕಳುಹಿಸಲು ಕರೆ ನೀಡಲಾಗಿದೆ. ಇದು ಗಡಿಯಲ್ಲಿ ರಾಷ್ಟ್ರಧ್ಬಜವನ್ನು ನೆಟ್ಟು, ಪ್ರಾಣ ಬಿಡುವ ಸೈನಿಕರಿಗೆ, ಅನ್ನದಾತನಾದ ರೈತನಿಗೆ ಗೌರವ ನೀಡುವ ಕಾರ್ಯಕ್ರಮ ಎಂದರು.
ಕಾಕ್ರೋಚ್ ಪಕ್ಷಕ್ಕೆ ಪಾಕಿಸ್ತಾನದ ಬೆಂಬಲ ಇದೆ. ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಆಗಮಿಸಿ, ದೇಶದ್ರೋಹಿ ಹೇಳಿಕೆಗಳನ್ನು ನೀಡಿದರು. ಪ್ರತಿಭಟನಾಕಾರರು ಮೋದಿ ವಿರುದ್ಧ ಕೆಟ್ಟ ಶಬ್ದಗಳಿಂದ ಮಾತನಾಡಿದರು. ನಾವು ಪೂಜಿಸುವ ಸೀತಾ ಮಾತೆ, ಪ್ರಭು ರಾಮಚಂದ್ರನ ವಿರುದ್ಧ ಕೆಟ್ಟ ಪದ ಬಳಸಿದರು. ಹಾಗಾಗಿ ಕಾಕ್ರೋಚ್ ಪಕ್ಷದ ವಿರುದ್ಧ ಧ್ವನಿ ಮೊಳಗಿಸುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಿರಂಗಾ ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಎರಡು ತಂಡವಿಲ್ಲ; ಬಿಜೆಪಿ ಎಂಬ ಒಂದೇ ತಂಡ – ಮಠಂದೂರು
ಬಿಜೆಪಿಯ ಇನ್ನೊಂದು ತಂಡದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿಯಲ್ಲಿ ಎರಡು ಪಕ್ಷವಿಲ್ಲ. ಇರುವುದು ಬಿಜೆಪಿ ಒಂದೇ ಪಕ್ಷ. ಇಲ್ಲಿ ತಂಡವಾಗಿ ಕೆಲಸ ಮಾಡ್ತಾ ಇದ್ದೇವೆ. ಹಾಗೆಂದು ತಿರಂಗಾ ಯಾತ್ರೆ ಬಿಜೆಪಿ ಬ್ಯಾನರಲ್ಲಿ ಆಗ್ತಾ ಇಲ್ಲ. ರಾಷ್ಟ್ರಧ್ವಜದ ಅಡಿಯಲ್ಲಿ ಆಗ್ತಾ ಇದೆ. ಹಾಗಾಗಿ ಪೂರ್ವ ಸೈನಿಕರು, ಸಾರ್ವಜನಿಕರು ಎಲ್ಲರೂ ಭಾಗವಹಿಸಬೇಕು ಎಂದು ಆಹ್ವಾನ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷರುಗಳಾದ ದಯಾನಂದ್ ಉಜಿರೆಮಾರು, ಶಿವಕುಮಾರ್ ಕಲ್ಲಿಮಾರ್, ಪ್ರಮುಖರಾದ ಯತೀಶ್ ಆರುವಾರ, ಅಶೋಕ್ ಮಾರ್ತಾ, ಸುನಿಲ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
























