tamanvi
ಶಿಕ್ಷಣಸ್ಥಳೀಯ

ಬೆಟ್ಟಂಪಾಡಿಯಲ್ಲಿ ಸೆ.19ರಂದು 21ನೇ ಸರಣಿಯ ‘ಗ್ರಾಮ ಸಾಹಿತ್ಯ ಸಂಭ್ರಮ’

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕನ್ನಡ ಸಾಹಿತ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ವತಿಯಿಂದ ನಡೆಯುತ್ತಿರುವ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ‘ಗ್ರಾಮ ಸಾಹಿತ್ಯ ಸಂಭ್ರಮ’ ಇದೀಗ 21ನೇ ಸರಣಿಗೆ ತಲುಪಿದೆ.

ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 32 ಗ್ರಾಮಗಳನ್ನು ಒಳಗೊಂಡು ಐದು ವರ್ಷಗಳಿಂದ ಗ್ರಾಮ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ನಡೆಯುತ್ತಿರುವ ಈ ಅಭಿಯಾನದ 21ನೇ ಸರಣಿ ಸೆ.19ರಂದು ಬೆಟ್ಟಂಪಾಡಿಯಲ್ಲಿ ನಡೆಯಲಿದೆ. ಅ.2ರಂದು ಬಲ್ನಾಡಿನಲ್ಲಿ ನಡೆಯುವ ಕಾರ್ಯಕ್ರಮದೊಂದಿಗೆ ಪುತ್ತೂರು ತಾಲೂಕಿನ 32 ಗ್ರಾಮಗಳನ್ನೂ ಒಳಗೊಂಡ ಐದು ವರ್ಷಗಳ ಅಭಿಯಾನ ಪೂರ್ಣಗೊಳ್ಳಲಿದೆ.

ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ, ಅಬುದಾಬಿ ಅವರ ಮಹಾಪೋಷಕತ್ವದಲ್ಲಿ, ನಾರಾಯಣ ಕುಂಬ್ರ ಅವರ ಸಂಚಾಲಕತ್ವದಲ್ಲಿ ಹಾಗೂ ಸಾಹಿತ್ಯ ಸೇವಕರ ಸಹಕಾರದೊಂದಿಗೆ ಈ ಅಭಿಯಾನ ನಡೆಯುತ್ತಿದೆ.

ವಿದ್ಯಾರ್ಥಿಗಳೇ ಕೇಂದ್ರಬಿಂದು

ಗ್ರಾಮ ಸಾಹಿತ್ಯ ಸಂಭ್ರಮದ ಪ್ರಮುಖ ವಿಶೇಷತೆಯಾಗಿ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪ್ರತಿಭೆಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸಕಥನ, ‘ನನ್ನ ಆಪ್ತಮಿತ್ರ’, ‘ನನ್ನ ನೆಚ್ಚಿನ ಶಿಕ್ಷಕಿ/ಶಿಕ್ಷಕ’ ಸೇರಿದಂತೆ ವಿವಿಧ ಸಾಹಿತ್ಯಿಕ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

ಶಿಕ್ಷಣ ಇಲಾಖೆಯ ಸುತ್ತೋಲೆಯ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ ಮತ್ತು ಬಲ್ನಾಡಿನಲ್ಲಿ ಕಾರ್ಯಕ್ರಮದ ಸ್ವರೂಪದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕರೆತಂದು ಸಾಮೂಹಿಕ ಕಾರ್ಯಕ್ರಮ ನಡೆಸುವ ಬದಲು, ಸಾಹಿತ್ಯಿಕ ಗೋಷ್ಠಿಗಳನ್ನು ಸಂಬಂಧಪಟ್ಟ ಶಾಲೆಗಳಲ್ಲಿಯೇ ನಡೆಸಲಾಗಿದೆ. ಬೆಟ್ಟಂಪಾಡಿ ಗ್ರಾಮದ 11 ಶಾಲಾ-ಕಾಲೇಜುಗಳ ಸುಮಾರು 200 ವಿದ್ಯಾರ್ಥಿಗಳು ವಿವಿಧ ಸಾಹಿತ್ಯಿಕ ವಿಭಾಗಗಳಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅವರವರ ಶಾಲೆಗಳಲ್ಲಿಯೇ ಪ್ರಮಾಣ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಲಾಗುತ್ತದೆ.

16 ಗ್ರಾಮ ಸಾಧಕರಿಗೆ ಗೌರವ

ಗ್ರಾಮ ಸಾಹಿತ್ಯ ಸಂಭ್ರಮದ ಅಂಗವಾಗಿ ಆಯಾ ಗ್ರಾಮದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ.

ಬೆಟ್ಟಂಪಾಡಿ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಮಂಜುಳಗಿರಿ ವೆಂಕಟರಮಣ ಭಟ್, ಪತ್ರಿಕಾ ಮಾಧ್ಯಮದ ಉಮೇಶ್ ಗೌಡ ಮಿತ್ತಡ್ಕ, ಜನಪದ ಕ್ಷೇತ್ರದ ಚೋಮ ಬೆಟ್ಟಂಪಾಡಿ, ಇತಿಹಾಸ ಅಧ್ಯಯನ ಮತ್ತು ಸಂಶೋಧನೆಯ ಡಾ. ಪ್ರಮೋದ್ ಕುಮಾರ್ ಎಂ.ಜಿ., ನಾಟಿ ವೈದ್ಯಕೀಯ ಕ್ಷೇತ್ರದ ಕೈಜಮ್ಮ ಕೋನಡ್ಕ, ಶಿಕ್ಷಣ ಕ್ಷೇತ್ರದ ಯು. ದೇವಪ್ಪ ನಾಯ್ಕ ಉಪ್ಪಳಿಗೆ, ಕೃಷಿ ಕ್ಷೇತ್ರದ ಅನಿತಾ ಕೂವೆಂಜ ಮತ್ತು ಸುಬ್ಬಣ್ಣ ಗೌಡ ಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಒಟ್ಟು 16 ಗ್ರಾಮ ಸಾಧಕರನ್ನು ಅಭಿನಂದಿಸಲಾಗುತ್ತದೆ.

ಇದರೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ‘ವಿಶೇಷ ಸಾಧಕ ಪುರಸ್ಕಾರ’ ನೀಡಿ ಗೌರವಿಸಲಾಗುತ್ತದೆ.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಹಿಸಲಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಅಂತಿಮ ಬಿ.ಎಸ್ಸಿ ವಿಭಾಗದ ವಿದ್ಯಾರ್ಥಿನಿ ವೇದಾವತಿ ಬಿ. ಸರ್ವಾಧ್ಯಕ್ಷತೆ ವಹಿಸಲಿದ್ದು, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರನ್ವಿ ಪ್ರಸಾದ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಧರ್ಮಪಾಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ, ಮಾಜಿ ಅಧ್ಯಕ್ಷೆ ವಿದ್ಯಾಶ್ರೀ, ಪ್ರಿಯದರ್ಶಿನಿ ಪ್ರೌಢಶಾಲೆಯ ಸಂಚಾಲಕ ಡಾ. ಸತೀಶ್ ರಾವ್ ಹಾಗೂ ಮಾಜಿ ಉಪಾಧ್ಯಕ್ಷ ಮಹೇಶ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಾ. ಸುಬ್ರಹ್ಮಣ್ಯ ಭಟ್ ಅವರು ‘ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಾ. ಹಾಜಿ ಅಬೂಬಕ್ಕರ್ ಎಸ್. ಆರ್ಲ ಪದವು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಸಾಹಿತ್ಯ ಅಭಿಯಾನ

ಯಾವುದೇ ಅದ್ಧೂರಿ ವೆಚ್ಚಕ್ಕೆ ಆದ್ಯತೆ ನೀಡದೆ, ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಸ್ಥಳೀಯ ಸಂಸ್ಥೆಗಳು ಹಾಗೂ ಸಾಹಿತ್ಯ ಸೇವಕರ ಸಹಕಾರದೊಂದಿಗೆ ಈ ಅಭಿಯಾನವನ್ನು ನಡೆಸಲಾಗುತ್ತಿದೆ.

ಒಂದು ತಾಲೂಕು ವ್ಯಾಪ್ತಿಯ 22 ಗ್ರಾಮ ಪಂಚಾಯಿತಿಗಳ 32 ಗ್ರಾಮಗಳನ್ನು ಒಳಗೊಂಡು ಐದು ವರ್ಷಗಳ ಕಾಲ ನಿರಂತರವಾಗಿ ಗ್ರಾಮ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಪ್ರಯತ್ನವಾಗಿದೆ.

‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಆಶಯದೊಂದಿಗೆ ಗ್ರಾಮದ ಪ್ರತಿಭೆಗಳಿಗೆ ವೇದಿಕೆ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಪ್ರೇರಣೆ ಹಾಗೂ ಸಾಧಕರಿಗೆ ಗೌರವ ನೀಡುವ ಗ್ರಾಮ ಸಾಹಿತ್ಯ ಸಂಭ್ರಮದ 21ನೇ ಸರಣಿ ಸೆ.19ರಂದು ಬೆಟ್ಟಂಪಾಡಿಯಲ್ಲಿ ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 163