tamanvi
ದೇಶ

ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ: ಸೆ.17ರಿಂದ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ 25 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಿಂದ ಒಂದು ತಿಂಗಳ ಕಾಲ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಒಬ್ಬ ವ್ಯಕ್ತಿಯ ಜನ್ಮದಿನವಾಗಿ ಮಾತ್ರವಲ್ಲದೆ ದೇಶದ ಜನರ ಸಂಭ್ರಮದ ಸಂದರ್ಭವಾಗಿ ಆಚರಿಸಲಾಗುವುದು ಎಂದು ಹೇಳಿದರು.

ಅರ್ಹರಿಗೆ ಕೇಂದ್ರ ಯೋಜನೆಗಳ ಸೌಲಭ್ಯ

‘ಸೇವಾ ಸೇತು’ ಅಭಿಯಾನದಡಿ ಬ್ಲಾಕ್ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ನಡ್ಡಾ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಫಲಾನುಭವಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಾರಾಣಸಿಯಿಂದ ಪ್ರಧಾನಿ ಮೋದಿಯವರ ಜನ್ಮಸ್ಥಳ ವಡನಗರದವರೆಗೆ ವಿಶೇಷ ಯಾತ್ರೆ ನಡೆಯಲಿದೆ ಎಂದು ಅವರು ಹೇಳಿದರು.

12 ಪ್ರಮುಖ ಕಾರ್ಯಕ್ರಮಗಳ ಆಯೋಜನೆ

ಸೆಪ್ಟೆಂಬರ್ 17ರಿಂದ ಆರಂಭವಾಗುವ ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು 12 ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಕ್ಟೋಬರ್ 17ರಂದು ‘ಸುಶಾಸನ ಸಂವಾದ’ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ನಡ್ಡಾ ತಿಳಿಸಿದರು.

ಒಂದು ದೇಶ, ಒಂದು ತೆರಿಗೆ (ಜಿಎಸ್‌ಟಿ), ಮೂಲಸೌಕರ್ಯ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೆ, ರಕ್ಷಣಾ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲಿ ಪ್ರಗತಿಯಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

2037ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ನಡ್ಡಾ ಹೇಳಿದರು. ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ವೇ ಮೋದಿ ಅವರ ಸಂಕಲ್ಪ ಎಂದು ಅವರು ತಿಳಿಸಿದರು.

ರಾಹುಲ್ ಗಾಂಧಿ ವಿರುದ್ಧ ಟೀಕೆ

ಇದೇ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರ್ಥಿಕತೆಯ ಕುರಿತ ಟೀಕೆಗಳನ್ನು ಜೆ.ಪಿ. ನಡ್ಡಾ ಪ್ರಶ್ನಿಸಿದರು. ರಾಹುಲ್ ಗಾಂಧಿಯವರಿಗೆ ಅರ್ಥಶಾಸ್ತ್ರದ ಮೂಲಭೂತ ಜ್ಞಾನವೂ ಇಲ್ಲ ಎಂದು ಟೀಕಿಸಿದ ಅವರು, ಇದೇ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ಪಿ.ಸಿ. ಮೋಹನ್, ಡಾ. ಸಿ.ಎನ್. ಮಂಜುನಾಥ್ ಹಾಗೂ ಡಾ. ಅಶ್ವತ್ಥನಾರಾಯಣ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts