ಪ್ರೇಕ್ಷಕರನ್ನು ರಂಜಿಸಲು ನಡೆಸಿದ್ದ ಅಪಾಯಕಾರಿ ‘ಲೈವ್ ಅಂತ್ಯಕ್ರಿಯೆ’ ಸಾಹಸ ಪ್ರದರ್ಶನ ದುರಂತದಲ್ಲಿ ಅಂತ್ಯಗೊಂಡಿದ್ದು, 27 ವರ್ಷದ ಸೈಕಲ್ ಸಾಹಸಿ ದೀಪಕ್ ನೆಲದಡಿಯಲ್ಲಿ ಹೂತಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದೆ.
ನುಹ್ ಜಿಲ್ಲೆಯ ಟೌರು ಉಪವಿಭಾಗದ ಖೋರಿ ಕಲಾನ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸೈಕಲ್ ಸರ್ಕಸ್ ನಡೆಯುತ್ತಿತ್ತು. ಫರಿದಾಬಾದ್ ಜಿಲ್ಲೆಯ ಗೌಂಚಿ ಗ್ರಾಮದ ನಿವಾಸಿಯಾಗಿದ್ದ ದೀಪಕ್ ಸರ್ಕಸ್ ತಂಡದ ಪ್ರಮುಖ ಸಾಹಸ ಕಲಾವಿದರಾಗಿದ್ದು, ಕೈ ಬಿಡದೆ ಸೈಕಲ್ ಚಲಿಸುವುದು, ಹ್ಯಾಂಡಲ್‌ಬಾರ್ ಮೇಲೆ ಸಮತೋಲನ ಸಾಧಿಸುವುದು ಹಾಗೂ ಸೈಕಲ್ ಓಡಿಸುತ್ತಲೇ ನಿಂತುಕೊಳ್ಳುವಂತಹ ಅಪಾಯಕಾರಿ ಸಾಹಸಗಳಿಂದ ಜನರನ್ನು ರಂಜಿಸುತ್ತಿದ್ದರು.
ಸರ್ಕಸ್‌ನ ಕೊನೆಯ ದಿನ ವಿಶೇಷ ಪ್ರದರ್ಶನದ ಭಾಗವಾಗಿ ದೀಪಕ್ ಅವರನ್ನು ಚೀಲದೊಳಗೆ ಇರಿಸಿ, ವಿಶೇಷವಾಗಿ ಅಗೆದ ಗುಂಡಿಯೊಳಗೆ ಇಳಿಸಿ ಮಣ್ಣಿನಿಂದ ಮುಚ್ಚಲಾಗಿತ್ತು. 24 ಗಂಟೆಗಳ ಬಳಿಕ ಅವರನ್ನು ಸುರಕ್ಷಿತವಾಗಿ ಹೊರತೆಗೆದು ಪ್ರದರ್ಶನ ಪೂರ್ಣಗೊಳಿಸಲಾಗುವುದು ಎಂದು ಆಯೋಜಕರು ಪ್ರೇಕ್ಷಕರಿಗೆ ತಿಳಿಸಿದ್ದರು.
ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ದೀಪಕ್ ಅವರನ್ನು ನಿಗದಿತ ಸಮಯಕ್ಕೆ ಹೊರತೆಗೆಯದೆ ಸುಮಾರು 36 ಗಂಟೆಗಳ ಕಾಲ ನೆಲದಡಿಯಲ್ಲೇ ಇರಿಸಲಾಗಿತ್ತು. ಪ್ರೇಕ್ಷಕರಿಂದ ರೂ. 7,100 ಸಂಗ್ರಹವಾದ ಬಳಿಕವೇ ಅವರನ್ನು ಹೊರತೆಗೆದುಕೊಳ್ಳುವುದಾಗಿ ಘೋಷಿಸಿದ್ದರಿಂದ ರಕ್ಷಣೆಯಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೊನೆಗೆ ಗುಂಡಿಯನ್ನು ತೆರೆದಾಗ ದೀಪಕ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ದೀರ್ಘಕಾಲ ನೆಲದಡಿಯಲ್ಲಿ ಹೂತುಹೋಗಿದ್ದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದು, ಇಂತಹ ಅಪಾಯಕಾರಿ ಸಾಹಸ ಪ್ರದರ್ಶನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬ ಪ್ರಶ್ನೆಗಳು ಮೂಡಿವೆ. ಆಯೋಜಕರ ನಿರ್ಲಕ್ಷ್ಯವೇ ಸಾವಿಗೆ ಕಾರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ ವಕ್ತಾರ ಕೃಷ್ಣ ಕುಮಾರ್ ಘಟನೆ ನಡೆದಿರುವುದನ್ನು ದೃಢಪಡಿಸಿದ್ದು, ಅಸ್ವಾಭಾವಿಕ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.























