ಪುತ್ತೂರು: ಶಿವಳ್ಳಿ ಸಂಪದ ಬೋಳುವಾರು ವಲಯದ ಆಶ್ರಯದಲ್ಲಿ ಕೆಮ್ಮಾಯಿಯ ಶ್ರೀವಿಷ್ಣು ಮಂಟಪದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ‘ಹರಿವಂಶ ಪುರಾಣ ಪ್ರವಚನ’ ಸಪ್ತಾಹಕ್ಕೆ ಸೆ.15ರಂದು ಸಂಜೆ ಚಾಲನೆ ದೊರೆಯಿತು. ಪ್ರವಚನ ಕಾರ್ಯಕ್ರಮವು ಸೆ.21ರವರೆಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಆಶಿತ್ ಕೃಷ್ಣ ರಾವ್ ಪ್ರಾರ್ಥನೆ ನೆರವೇರಿಸಿದರು. ಬೋಳುವಾರು ವಲಯದ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಅತಿಥಿಗಳನ್ನು ಸ್ವಾಗತಿಸಿದರು. ಮೈಸೂರಿನ ಪ್ರವಚನಕಾರ ಡಾ. ಬಿ.ನಾ. ವಿಜಯೇಂದ್ರ ಆಚಾರ್ಯ ‘ಹರಿವಂಶ ಪುರಾಣ’ ಕುರಿತು ಮುಖ್ಯ ಪ್ರವಚನ ನೀಡಿದರು.
ಜಿ.ಎಲ್. ಸಮೂಹ ಸಂಸ್ಥೆಗಳ ಜಿ.ಎಲ್. ಬಲರಾಮ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ತಮ ಸಂಘಟನೆಯೊಂದಿಗೆ ಆಯೋಜಿಸಿರುವ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಹರಿವಂಶ ಪುರಾಣದ ಮಹತ್ವ ಎಲ್ಲರಿಗೂ ತಿಳಿಯುವಂತಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಶಾರದಾ ಮಹಾವಿದ್ಯಾಲಯದ ಸಂಸ್ಥಾಪಕ ಎಂ.ಬಿ. ಪುರಾಣಿಕ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಸ್ಕಾರ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ. ಹೆತ್ತವರು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳೆಸಬೇಕು. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ಹೇಳಿದರು. ಅವರ ಪರಿಚಯವನ್ನು ಡಾ. ಮಾಧವ ಭಟ್ ನೆರವೇರಿಸಿದರು.
ಶಿವಳ್ಳಿ ಸಂಪದ ಬೋಳುವಾರು ವಲಯದ ಅಧ್ಯಕ್ಷ ಅನಂತಕೃಷ್ಣ ಪಡ್ಡಿಲ್ಲಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕೆ.ಎಸ್. ಮಾತನಾಡಿ, ಯುವಜನರು ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಮಂಗಳೂರಿನ ಶಿವಳ್ಳಿ ಸಭಾ ಸಂಚಾಲಕ ಗಣೇಶ್ ಹೆಬ್ಬಾರ್, ತಾಲೂಕು ಮಹಿಳಾ ಸಂಪದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞಿ ಹಾಗೂ ವಲಯ ಮಹಿಳಾ ಸಂಪದ ಅಧ್ಯಕ್ಷೆ ಅನ್ನಪೂರ್ಣ ಶೇವಿರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಮಕುಂಜ ಶಾಲೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಡಾ. ನಾರಾಯಣ ಭಟ್ ಹಾಗೂ ಯಶಸ್ವಿ ಉದ್ಯಮಿ ಮತ್ತು ಬ್ರಾಹ್ಮಣ ಸಂಘಟನೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಗಣೇಶ್ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೋಳುವಾರು ವಲಯದ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ, ಕೋಶಾಧಿಕಾರಿ ಅನಂತ ಪದ್ಮನಾಭ ಕದಂಬಳಿತ್ತಾಯ ಸೇರಿದಂತೆ ಶಿವಳ್ಳಿ ಸಂಪದದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಸೆ.21ರವರೆಗೆ ನಡೆಯಲಿರುವ ‘ಹರಿವಂಶ ಪುರಾಣ ಪ್ರವಚನ’ ಸಪ್ತಾಹದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.























