
ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ (SPYSS) ವತಿಯಿಂದ ಐದನೇ ಬಾರಿಗೆ ಸಾಮೂಹಿಕ ಗಣಪತಿ ಯೋಗ ನಮಸ್ಕಾರ ಕಾರ್ಯಕ್ರಮವು ಸೆ.14ರಂದು ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಬಲ್ನಾಡಿನ ಪ್ರಾಚೀನ ಪ್ರಸಿದ್ಧ ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಪುತ್ತೂರು ತಾಲೂಕಿನ ವಿವಿಧ ಶಾಖೆಗಳ ಸುಮಾರು 250ಕ್ಕೂ ಅಧಿಕ ಯೋಗಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಹಾಗಣಪತಿಗೆ ಯೋಗದ ಮೂಲಕ ನಮನ ಸಲ್ಲಿಸಿದರು.

ಸುರೇಶ್ ಟವರ್ಸ್ ಶಾಖೆಯ ಯೋಗಬಂಧುಗಳ ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ ಹಾಗೂ ಗಣಪತಿ ನಮಸ್ಕಾರ, ದುರ್ಗಾ ನಮಸ್ಕಾರ, ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಭ್ಯಾಸಗಳನ್ನು ಶ್ರೀಮತಿ ಪೂರ್ಣಿಮಾ ನಡೆಸಿಕೊಟ್ಟರು. ಶಿಕ್ಷಕರಾದ ಶ್ರೀಮತಿ ಪವಿತ್ರಾ (ಸಾಜ ಶಾಖೆ), ಶ್ರೀ ದಯಾನಂದ (ಸಂಪ್ಯ ಶಾಖೆ) ಹಾಗೂ ಯೋಗಬಂಧುಗಳು ಸಹಕಾರ ನೀಡಿದರು.
ಚೌತಿ ಆಚರಣೆಯ ಮಹತ್ವ, ಕಾರ್ಯಕ್ರಮದ ಉದ್ದೇಶ ಹಾಗೂ ದಿನದ ವಿಶೇಷ ಬೌದ್ಧಿಕ್ ಅನ್ನು ಬೆಳಿಯೂರುಕಟ್ಟೆ ಶಾಖೆಯ ಶ್ರೀ ಮುರಳೀಧರ ನಡೆಸಿಕೊಟ್ಟರು. ಮಹಾಲಿಂಗೇಶ್ವರ ಶಾಖೆಯ ಶ್ರೀ ಜಗನ್ನಾಥ ದಂಪತಿಗಳು ಅಗ್ನಿಹೋತ್ರ ನೆರವೇರಿಸಿದರು.
ಯೋಗಾಭ್ಯಾಸದ ಬಳಿಕ ಯೋಗಬಂಧುಗಳು ದೇವಸ್ಥಾನಕ್ಕೆ ತೆರಳಿ ಕ್ಷೇತ್ರದೇವರಾದ ಶ್ರೀ ಗಣಪತಿ ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ಯೋಗಬಂಧುಗಳಿಗೆ ಪ್ರಸಾದ ವಿತರಣೆಯ ಸೇವಾ ಜವಾಬ್ದಾರಿಯನ್ನು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದ ಅರ್ಚಕ ವೃಂದ, ಆಡಳಿತ ಮಂಡಳಿ ಹಾಗೂ ತಾಲೂಕು ಶಾಖೆಯವರು ಜಂಟಿಯಾಗಿ ನಿರ್ವಹಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಉಳ್ಳಾಲ್ತಿ ದಂಡನಾಯಕ ಶಾಖೆಯ ಶ್ರೀಮತಿ ಲಲಿತಾ ನೆರವೇರಿಸಿದರು. ಕಾರ್ಯಕ್ರಮದ ಸಂಚಾಲಕರಾದ ಕಲ್ಲೆಗ ಶಾಖೆಯ ಶ್ರೀ ಹೇಮಚಂದ್ರ ವಂದನಾರ್ಪಣೆ ಸಲ್ಲಿಸಿದರು.
ಸಮಿತಿಯ ಜಿಲ್ಲಾ ಹಾಗೂ ತಾಲೂಕು ಪ್ರಮುಖರು ಸೇರಿದಂತೆ ಪುತ್ತೂರು ತಾಲೂಕಿನ ಸುಮಾರು 250ಕ್ಕೂ ಅಧಿಕ ಯೋಗಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.






















