tamanvi
ಧಾರ್ಮಿಕ

ಸೆ. 17: ಪುತ್ತೂರಿನಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ, ವೈಭವದ ಶೋಭಾಯಾತ್ರೆ, ಪ್ರತಿಭಾ ಪುರಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಸೆ. 17ರ ಗುರುವಾರ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ವಿವಿಧ ವಿಶ್ವಕರ್ಮ ಸಂಘ ಸಂಸ್ಥೆಗಳ ಸಹಕಾರದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವದ ಮೆರವಣಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥಬೀದಿಯಿಂದ ಬೊಳುವಾರುವರೆಗೆ ನಡೆಯಲಿದೆ.

ಸೆ. 17ರಂದು ವಿಶ್ವಕರ್ಮ ಯುವ ಸಮಾಜ ಪುತ್ತೂರು, ವಿಶ್ವಬ್ರಾಹ್ಮಣ ಸೇವಾ ಸಂಘದ ನೇತೃತ್ವದಲ್ಲಿ ವಿಶ್ವಕರ್ಮ ಸಮಾಜದ ಕ್ಷೇಮಾಭಿವೃದ್ಧಿಗಾಗಿ ಬೆಳಿಗ್ಗೆ 7 ಗಂಟೆಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ವಿಶ್ವಕರ್ಮ ಹೋಮ ಜರುಗಲಿದೆ.

ಭವ್ಯ ಮೆರವಣಿಗೆ

ಬೆಳಿಗ್ಗೆ 8.30ಕ್ಕೆ ವಿಶ್ವಕರ್ಮ ಪೂಜಾ ಮಹೋತ್ಸವದ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥಬೀದಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದವರೆಗೆ ವಿಶ್ವಕರ್ಮ ದೇವರ ಅಲಂಕೃತ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಚೆಂಡೆ, ವಾಲಗ ಸಹಿತ ಮೆರವಣಿಗೆ ಸಾಗಲಿದೆ. ಕಾಷ್ಠಶಿಲ್ಪಿ ನಾರಾಯಣ ಆಚಾರ್ಯ ಪರ್ಪುಂಜ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ವಿಶ್ವಕರ್ಮ ಪೂಜಾ ಮಹೋತ್ಸವದ ಮೆರವಣಿಗೆಯಲ್ಲಿ ವಿಶ್ವಕರ್ಮ ಯುವ ಸಮಾಜ, ಬೊಳ್ವಾರು ವಿಶ್ವಬ್ರಾಹ್ಮಣ ಸೇವಾ ಸಂಘ, ಪುತ್ತೂರು ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ, ಆನೆಗುಂದಿ ಗುರು ಸೇವಾ ಪರಿಷತ್, ವಿಶ್ವಕರ್ಮ ಯುವ ಮಿಲನ್, ಪಂಚಮುಖಿ ಗೆಳೆಯರ ಬಳಗ, ವಿಶ್ವಕರ್ಮ ಮಹಿಳಾ ಮಂಡಳಿ, ಬೀರಮಲೆ ವಿಶ್ವಕರ್ಮ ಸಮಾಜ ಸಭಾ, ಗಾಯತ್ರಿ ಮಹಿಳಾ ಮಂಡಳಿ, ವಿಶ್ವಕರ್ಮ ಸೇವಾ ಸಂಘ, ಬೊಳ್ವಾರು ಭಾವನಾ ಕಲಾ ಆರ್ಟ್ಸ್, ದ.ಕ. ಜಿಲ್ಲಾ ಕಮ್ಮಾರರ ಗುಡಿ ಕೈಗಾರಿಕಾ ಸಂಘ, ಉಪ್ಪಿನಂಗಡಿ ಕಾಳಿಕಾಂಬಾ ಮಹಿಳಾ ಸಂಘ, ಬೀರಮಲೆ ವಿಶ್ವಕರ್ಮ ಯುವಕ ಸಂಘ, ಭಕ್ತಕೋಡಿ ವಿಶ್ವಕರ್ಮ ಸಮಾಜ ಸೇವಾ ಸಂಘಟನೆಗಳು ಪಾಲ್ಗೊಳ್ಳಲಿವೆ.

ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ

11.30ಕ್ಕೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಧಾರ್ಮಿಕ ಸಭೆ ಹಾಗೂ ವಿಶೇಷ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ ಆಚಾರ್ಯ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಹೆಜಮಾಡಿ ಕರಾವಳಿ ಕಾವಲು ಪೊಲೀಸ್ ಪಡೆಯ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ. ಮುಖ್ಯಅತಿಥಿಯಾಗಿರುವರು.

ಪುರೋಹಿತ್ ಕೆ. ರಮೇಶ್ ಗೇರುಕಟ್ಟೆ ಅವರ ಆಚಾರ್ಯತ್ವದಲ್ಲಿ ಶ್ರೀ ವಿಶ್ವಕರ್ಮ ಪೂಜೆ ನಡೆಯಲಿದ್ದು, ಮಧ್ಯಾಹ್ನ 2.30 ಗಂಟೆಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ.

ವಿಶ್ವಕರ್ಮ ಸಮಾಜ ಬಾಂಧವರು ವಿಶ್ವಕರ್ಮ ಮಹೋತ್ಸವದ ದಿನದಂದು ತಮ್ಮ ಅಂಗಡಿ ಕೆಲಸಗಳಿಗೆ ರಜೆ ಮಾಡಿಕೊಂಡು, ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಕ್ಲಪ್ತ ಸಮಯಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಬೇಕು. ವಿಶ್ವಕರ್ಮ ಹೋಮದ ಸಂಕಲ್ಪಕ್ಕಾಗಿ ಬೆಳಿಗ್ಗೆ 6.30ಕ್ಕೆ ಪಂಚೆ ಶಾಲು ಸಮೇತರಾಗಿ ಉಪಸ್ಥಿತರಿರಬೇಕು. ವಿದ್ಯಾರ್ಥಿವೇತನ ದತ್ತಿನಿಧಿಗೆ 2 ಸಾವಿರ ರೂ. ಮೇಲ್ಪಟ್ಟು ದೇಣಿಗೆ ನೀಡಿದಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ದಾನಿಗಳ ಹೆಸರಿನಲ್ಲಿ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts