tamanvi
ಕರಾವಳಿ

ಪರಿಶುದ್ಧ ನಡವಳಿಕೆಯಿಂದಲೇ ದೇವಮಾನವತ್ವ ಸಾಧ್ಯ: ಡಾ. ಎಸ್.ಪಿ. ಗುರುದಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಯಾವುದೇ ವ್ಯಕ್ತಿ ದೇವಮಾನವ ಎನಿಸಿಕೊಳ್ಳಬೇಕಾದರೆ ಅವರ ನಡವಳಿಕೆ ಪರಿಶುದ್ಧವಾಗಿರಬೇಕು. ಜನರಲ್ಲಿ ಅವರ ಬಗ್ಗೆ ವಿಶ್ವಾಸ ಮೂಡಬೇಕು ಹಾಗೂ ನೈತಿಕ ಮೌಲ್ಯವುಳ್ಳ ಜೀವನ ನಡೆಸಬೇಕು. ಇಂತಹ ಪರಿಶುದ್ಧ ನಡವಳಿಕೆ ಇದ್ದವರಷ್ಟೇ ದೇವಮಾನವರಾಗಬಲ್ಲರು. ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಅವರ ಜೀವನದಲ್ಲಿ ಈ ಎಲ್ಲಾ ಗುಣಗಳು ಅಡಕವಾಗಿದ್ದವು ಎಂದು ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ಅಭಿಪ್ರಾಯಪಟ್ಟರು.

ಸೆ. 8ರಂದು ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರ ಜೀವನ ಮತ್ತು ಮೌಲ್ಯಗಳ ಕುರಿತ ಭಾಷಣ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಭಾಷಣವು ಬೌದ್ಧಿಕ ಅನ್ವೇಷಣೆಯಾಗಿದ್ದು, ಮಾತು ಸಮಾಜದ ಮೇಲೆ ಅದ್ಭುತ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿದೆ. ಮಹನೀಯರ ಜೀವನದ ಕುರಿತು ಮಾತನಾಡುವ ಮೂಲಕ ಹೊಸ ಆಲೋಚನೆಗಳು ಮತ್ತು ಹೊಸ ಬೆಳಕು ದೊರೆಯುತ್ತದೆ. ಬಾಬುರಾಯ ಆಚಾರ್ಯರ ಬದುಕು ಕೂಡ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತುವಂತಹದ್ದಾಗಿದೆ ಎಂದು ಹೇಳಿದರು.

ಮೌಲ್ಯಕ್ಕೆ ಸಾಧನಾ ಮೌಲ್ಯ ಮತ್ತು ಸಾಧ್ಯ ಮೌಲ್ಯ ಎಂಬ ಎರಡು ವಿಶಾಲ ಅರ್ಥಗಳಿವೆ. ಬಂಗಾರವನ್ನು ಬಳಸಿಕೊಂಡು ಸಾಧ್ಯ ಮೌಲ್ಯಕ್ಕೆ ಮಹತ್ವ ನೀಡಿದ ಬಾಬುರಾಯ ಆಚಾರ್ಯರು ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದರು. ಕೆನರಾ ಜ್ಯುವೆಲ್ಲರ್ಸ್ ಬ್ರಾಂಡ್ ಸ್ಥಾಪಿಸುವ ಮೂಲಕ ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ್ದರು. ಬಂಗಾರದ ಆಧ್ಯಾತ್ಮಿಕ ಮೌಲ್ಯವನ್ನೂ ಅರಿತಿದ್ದ ಅವರು, ಎಸ್.ಕೆ. ಗೋಲ್ಡ್ಸ್ಮಿತ್ಸ್ ಸೊಸೈಟಿಯನ್ನು ಸ್ಥಾಪಿಸಿ ಬಂಗಾರದ ಕೆಲಸಗಾರರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಿದ್ದರು ಎಂದು ಡಾ. ಗುರುದಾಸ್ ತಿಳಿಸಿದರು.

ಶಿಕ್ಷಣಕ್ಕೆ ಅಪಾರ ಮಹತ್ವ ನೀಡಿದ್ದ ಬಾಬುರಾಯ ಆಚಾರ್ಯರು, ಒಂದು ಸ್ಥಾನಕ್ಕೆ ಅಗತ್ಯವಾದ ಪರಿಶುದ್ಧತೆ ಇರುವವರೆಗೂ ಮಾತ್ರ ಆ ಸ್ಥಾನದಲ್ಲಿ ಇರಬೇಕು; ಅದು ಇಲ್ಲದಿದ್ದರೆ ಸ್ಥಾನದಿಂದ ಹೊರಬರಬೇಕು ಎಂಬ ತತ್ವವನ್ನು ಪ್ರತಿಪಾದಿಸಿದ್ದರು. ಗೌರವ ಗಳಿಸಬೇಕಾದರೆ ವ್ಯಕ್ತಿ ಆಂತರಿಕವಾಗಿ ಪರಿಶುದ್ಧನಾಗಿರಬೇಕು ಎಂಬುದಕ್ಕೆ ಅವರ ಬದುಕೇ ಉತ್ತಮ ನಿದರ್ಶನ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಸ್ವಾಮಿ ವಿವೇಕಾನಂದರ ‘ಪ್ರತಿಯೊಂದು ಆತ್ಮವೂ ದಿವ್ಯಾತ್ಮವಾಗಿದೆ’ ಎಂಬ ನುಡಿಯಂತೆ ಭಾಷಣ ಸ್ಪರ್ಧೆಯ ಮೂಲಕ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರನ್ನು ಸ್ಮರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಹಿರಿಯರ ಹೆಜ್ಜೆ ಗುರುತುಗಳು ಕಾಲಕ್ರಮೇಣ ಮಾಸಿಹೋಗುವ ಸಾಧ್ಯತೆ ಇರುತ್ತದೆ. ಆದರೆ ಅವರ ಕಾರ್ಯಗಳು, ಆದರ್ಶಗಳು ಮತ್ತು ತತ್ವಗಳನ್ನು ಸ್ಮರಿಸುವ ಮೂಲಕ ಮುಂದಿನ ಪೀಳಿಗೆಗೆ ಅವುಗಳ ಮಹತ್ವ ತಿಳಿಸಬಹುದು. ಇತರರಿಗಾಗಿ ಬದುಕುವವರು ದೈವತ್ವಕ್ಕೆ ಏರುತ್ತಾರೆ. ಹಿರಿಯರ ಸತ್ಕಾರ್ಯಗಳ ಹಾದಿಯಲ್ಲಿ ಸಾಗುವುದರಿಂದ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ದೊರೆಯುತ್ತದೆ ಎಂದು ಹೇಳಿದರು.

ಯುವ ಸಮುದಾಯದಲ್ಲಿ ದೇಶ ಮತ್ತು ಸಮಾಜಕ್ಕಾಗಿ ತಮ್ಮ ಕೊಡುಗೆ ಏನು ಎಂಬ ಚಿಂತನೆ ಮೂಡಬೇಕು. ಬದಲಾವಣೆಯ ಅಪೇಕ್ಷೆ ನಮ್ಮೊಳಗಿನಿಂದಲೇ ಆರಂಭವಾಗಬೇಕು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.

ಕೆನರಾ ಜ್ಯುವೆಲ್ಲರ್ಸ್ ಮಾಲೀಕ ಹಾಗೂ ಪಾಲ್ಕೆ ಬಾಬುರಾಯ ಆಚಾರ್ಯರ ಪುತ್ರ ಧನಂಜಯ ಪಾಲ್ಕೆ ಮಾತನಾಡಿ, ಎಸ್.ಕೆ. ಗೋಲ್ಡ್ಸ್ಮಿತ್ಸ್ ಸೊಸೈಟಿ ಆರಂಭವಾದ ಹಿನ್ನೆಲೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ಅವರ ಪ್ರೇರಣೆಯ ಕುರಿತು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಮಾತನಾಡಿ, ವರ್ಷಕ್ಕೊಮ್ಮೆ ಸಂಸ್ಮರಣೆ ಮಾಡುವುದಷ್ಟೇ ಅಲ್ಲದೆ, ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರ ಚಿಂತನೆಗಳು ಪ್ರತಿಧ್ವನಿಸುತ್ತವೆ ಎಂದು ಹೇಳಿದರು.

ಭಾಷಣ ಸ್ಪರ್ಧೆ ಫಲಿತಾಂಶ

ಕಾಲೇಜು ವಿಭಾಗ:

ಸ್ವಾತಿ ಭಟ್ – ಪ್ರಥಮ

ಭಕ್ತಿಶ್ರೀ – ದ್ವಿತೀಯ

ಮಾನ್ಯ ಆಚಾರ್ಯ – ತೃತೀಯ

ಲಾವಣ್ಯ – ಪ್ರೋತ್ಸಾಹಕ ಬಹುಮಾನ

ಮುಕ್ತ ವಿಭಾಗ:

ಪ್ರವೀಣ್ ಶರ್ಮಾ – ಪ್ರಥಮ

ಶ್ರೀಪತಿ ಆಚಾರ್ಯ – ದ್ವಿತೀಯ

ಧನಂಜಯ ಮೂಡುಬಿದಿರೆ – ತೃತೀಯ

ಲತಾ – ಪ್ರೋತ್ಸಾಹಕ ಬಹುಮಾನ

ವಿಜೇತರಿಗೆ ಪದಕ, ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ಹಾಗೂ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ, ನಿಟ್ಟೆ ಇದರ ಅಧ್ಯಕ್ಷ ಹರ್ಷವರ್ಧನ ನಿಟ್ಟೆ ಅವರು ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ವೈ.ವಿ. ವಿಶ್ವಜ್ಞಮೂರ್ತಿ ಪ್ರಾರ್ಥಿಸಿದರು. ನಿರ್ದೇಶಕರಾದ ಕೆ. ಯಜ್ಞೇಶ್ವರ ಆಚಾರ್ಯ, ವಿ. ಜಯ ಆಚಾರ್, ಕೆ. ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ಯು. ರಮೇಶ್ ರಾವ್, ಪ್ರಕಾಶ್ ಆಚಾರ್ಯ ಕೆ. ಹಾಗೂ ಚಂದ್ರಶೇಖರ್ ಎ.ಎಸ್. ಉಪಸ್ಥಿತರಿದ್ದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ, ಉಷಾ ಮನೋಜ್ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಕಲ್ಲುಗುಂಡಿಯ ಫಾತಿಮತ್ ನಿಶಾನ ಸಾವು ಪ್ರಕರಣ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಪುತ್ತೂರು ಕಾಂಗ್ರೆಸ್ ನಿಯೋಗ!

ಕಲ್ಲುಗುಂಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಫಾತಿಮತ್ ನಿಶಾನ ಅವರ ತಾಯಿ ಮನೆಯಾದ ಕುಂಬ್ರದ…