ಮಂಗಳೂರು: ಗ್ರಾಹಕರು ಆರ್ಡರ್ ಮಾಡಿದ್ದ ಚಿಕನ್ ಹಾಳಾಗಿದ್ದು, ದುರ್ವಾಸನೆ ಬರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಪ್ರಸಿದ್ಧ KFC ಔಟ್‌ಲೆಟ್ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಆಗಸ್ಟ್ 15ರಂದು ಗ್ರಾಹಕರೊಬ್ಬರು ಈ KFC ಔಟ್‌ಲೆಟ್‌ನಿಂದ ಆನ್‌ಲೈನ್ ಮೂಲಕ ‘ಪೆರಿ ಪೆರಿ ಚಿಕನ್’ ಆರ್ಡರ್ ಮಾಡಿದ್ದರು. ಆದರೆ, ಚಿಕನ್‌ನಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸೇವಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಗ್ರಾಹಕರು ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಹೆಚ್. ನೇತೃತ್ವದ ಅಧಿಕಾರಿಗಳ ತಂಡ KFC ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಡುಗೆ ಕೋಣೆ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ ಹಾಗೂ ಚಿಕನ್ ಬೇಯಿಸಲು ಬಳಸುವ ಎಣ್ಣೆಯ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಿದರು.
ತಪಾಸಣೆ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಹಳೆಯ ಕೋಳಿ ಮಾಂಸ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ರೋಜನ್ ಚಿಕನ್ ದೀರ್ಘಕಾಲ ಬಳಕೆಗೆ ಯೋಗ್ಯವಾಗಿರುತ್ತದೆ ಎಂದು KFC ಸಿಬ್ಬಂದಿ ಅಧಿಕಾರಿಗಳಿಗೆ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಮಳಿಗೆಯ ಗೋಡೌನ್ ಅನ್ನು ಸೀಜ್ ಮಾಡಿದ್ದು, ಸ್ಥಳದಿಂದ ಮೂರು ಬಗೆಯ ಚಿಕನ್ ಸ್ಯಾಂಪಲ್‌ಗಳು ಹಾಗೂ ಚಿಕನ್ ಕರಿಯಲು ಬಳಸುತ್ತಿದ್ದ ಎಣ್ಣೆಯ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ಸ್ವಚ್ಛತೆ ಕಾಪಾಡುವಂತೆ ಮಳಿಗೆಗೆ ನೋಟಿಸ್ ಜಾರಿ ಮಾಡಲಾಗುವುದು. ಲ್ಯಾಬ್ ವರದಿ ಬಂದ ಬಳಿಕ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಾನೂನು ಪ್ರಕರಣ ದಾಖಲಿಸಲಾಗುವುದು” ಎಂದು ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಸದ್ಯ ಮಳಿಗೆಯನ್ನು ಬಂದ್ ಮಾಡಿ, ಅಲ್ಲಿರುವ ಉತ್ಪನ್ನಗಳನ್ನು ತೆರವುಗೊಳಿಸಿ ಸಂಪೂರ್ಣ ಸ್ವಚ್ಛಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

































