ಬೆಳ್ತಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕೌಶಲ್ಯ ತರಬೇತಿ ನೀಡುವುದು ಎಷ್ಟು ಮುಖ್ಯವೋ, ಅದೇ ರೀತಿ ಮುಂದಿನ ವರ್ಷದಿಂದ ಹಾಲು ಸೊಸೈಟಿಗಳ ಅಧ್ಯಕ್ಷರಿಗೂ ಕೌಶಲ್ಯ ತರಬೇತಿ ನೀಡುವ ಉದ್ದೇಶವಿದೆ ಎಂದು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಹೇಳಿದರು.
ಬೆಳ್ತಂಗಡಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ದ.ಕ. ಸಹಕಾರಿ ಯೂನಿಯನ್ ಮಂಗಳೂರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಸಹಕಾರ ಇಲಾಖೆ ದ.ಕ. ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಿಇಒಗಳಿಗೆ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಹಕಾರದಿಂದಾಗಿ ಜಿಲ್ಲಾ ಸಹಕಾರಿ ಯೂನಿಯನ್ ಕಳೆದ ಸಾಲಿನಲ್ಲಿ ₹14 ಲಕ್ಷ ಲಾಭ ಗಳಿಸಿದ್ದು, ಶೇ.10ರಷ್ಟು ಲಾಭಾಂಶ ನೀಡುವಂತಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡಲು ಅವಕಾಶವಿರುವ ಹಾಲು ಸೊಸೈಟಿಗಳ ವ್ಯವಸ್ಥೆಯಲ್ಲಿ ಸಿಇಒಗಳು ತರಬೇತಿ ಪಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಾಗಾರವನ್ನು ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್ ಉದ್ಘಾಟಿಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪಿ. ಕುಶಾಲಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಪ್ರಭಾಕರ ಆರಂಬೋಡಿ ಹಾಗೂ ಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಸುಧೀರ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ. ಹಾಲು ಒಕ್ಕೂಟದ ಪುತ್ತೂರು ವಿಭಾಗದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಎಸ್. ಬಾಲಸುಬ್ರಹ್ಮಣ್ಯ ತರಬೇತಿ ನೀಡಿದರು.
ಹಾಲಿನ ಗುಣಮಟ್ಟ, ರಾಸುಗಳ ನಿರ್ವಹಣೆ, ಒಕ್ಕೂಟದ ಯೋಜನೆಗಳ ಸೌಲಭ್ಯಗಳು, ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ, ಸಿಇಒಗಳ ಜವಾಬ್ದಾರಿ ಹಾಗೂ ಕರ್ತವ್ಯಗಳು ಮತ್ತು ನಿವೃತ್ತ ಸಿಬ್ಬಂದಿಯ ಸೇವಾ ಸೌಲಭ್ಯಗಳ ಕುರಿತು ತರಬೇತಿ ನೀಡಲಾಯಿತು.
ಜಿಲ್ಲೆಯ ಒಟ್ಟು 4.40 ಲಕ್ಷ ಲೀಟರ್ ಹಾಲು ಉತ್ಪಾದನೆಯಲ್ಲಿ 1.23 ಲಕ್ಷ ಲೀಟರ್ ಹಾಲು ಬೆಳ್ತಂಗಡಿ ತಾಲೂಕಿನ 87 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಪೂರೈಕೆಯಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಉದಯ ಕೋಟ್ಯಾನ್ ಹೇಳಿದರು. “ನಾವು ಬೆಳೆಯುವುದು ಇನ್ನೊಬ್ಬರನ್ನು ಬೆಳೆಸುವುದೇ ಸಹಕಾರಿ ತತ್ವ” ಎಂದರು.
ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ಕಾರ್ಯಕ್ರಮ ಸಂಯೋಜಿಸಿದರು. ಇದೇ ವೇಳೆ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಅವರನ್ನು ಅಭಿನಂದಿಸಲಾಯಿತು.























