ಧರ್ಮಸ್ಥಳ, ಸೆ.30: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರದ ಅಗತ್ಯತೆ ಹೆಚ್ಚಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರವನ್ನು ಭಜನೆಯ ಮೂಲಕ ಬೆಳೆಸಿಕೊಳ್ಳಬಹುದು ಎಂದು ಉಜಿರೆಯ ಅಶೋಕ ಭಟ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಮೂರನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಅವರು, ಇಂದಿನ ಯುವ ಸಮಾಜ ವ್ಯವಹಾರಿಕ ಜೀವನ ಹಾಗೂ ಸಂಪಾದನೆಯ ನಡುವೆ ಸಂಸ್ಕಾರವನ್ನು ಮರೆಯುತ್ತಿರುವುದು ಕಂಡುಬರುತ್ತಿದೆ. ಸಂಸ್ಕಾರದ ಪುನಶ್ಚೇತನಕ್ಕೆ ಭಗವಂತನ ಸ್ಮರಣೆ ಸಹಕಾರಿಯಾಗುತ್ತದೆ ಎಂದರು.
ವ್ಯಸನಗಳ ಭೀತಿಗೆ ಸಂಸ್ಕಾರದ ಕೊರತೆಯೂ ಒಂದು ಕಾರಣವಾಗಿದ್ದು, ಮಕ್ಕಳ ಮೇಲಿನ ಅತಿಯಾದ ಮೋಹ-ವಾತ್ಸಲ್ಯವೂ ಸಂಸ್ಕಾರವನ್ನು ಮರೆಮಾಚುವಂತಾಗಿದೆ ಎಂದು ಅವರು ಹೇಳಿದರು.
ಭಾರತದ ಅಸ್ಮಿತೆಗೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಂಸ್ಕಾರ ಅತ್ಯಂತ ಮುಖ್ಯ. ಅಂತಹ ಸಂಸ್ಕಾರವನ್ನು ನೀಡುವಲ್ಲಿ ಭಜನೆ ಪ್ರಮುಖ ಪಾತ್ರ ವಹಿಸಿದ್ದು, ಇದಕ್ಕೆ ಹೆಚ್ಚಿನ ಕೊಡುಗೆ ನೀಡಿದ ಕೀರ್ತಿ ದಾಸ ಪರಂಪರೆಗೆ ಸಲ್ಲುತ್ತದೆ ಎಂದು ಅಶೋಕ ಭಟ್ ಹೇಳಿದರು.
ಆತ್ಮವು ಆಧ್ಯಾತ್ಮಿಕ ದಾರಿಯಲ್ಲಿ ಪರಮಾತ್ಮನ ಕಡೆಗೆ ಸಾಗಲು ಭಜನೆ ಸನ್ಮಾರ್ಗವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರು 28 ವರ್ಷಗಳಿಂದ ಭಜನಾ ಕಮ್ಮಟದ ಮೂಲಕ ಸಮಾಜದಲ್ಲಿ ಅನೇಕ ಧಾರ್ಮಿಕ ಬದಲಾವಣೆಗಳಿಗೆ ಕಾರಣರಾಗಿದ್ದು, ಯುವ ಪೀಳಿಗೆಯನ್ನು ಆಧ್ಯಾತ್ಮಿಕತೆಯ ಕಡೆಗೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ಭಜನಾ ತರಬೇತಿ
ಭಜನಾ ಕಮ್ಮಟದ ಮೂರನೇ ದಿನದ ಶಿಬಿರದಲ್ಲಿ ಕಾಸರಗೋಡಿನ ರಾಜ್ಯಮಟ್ಟದ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಅವರು ಶಿಬಿರಾರ್ಥಿಗಳಿಗೆ ಭಜನಾ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಹರಿದಾಸ ಸಾಹಿತ್ಯದ ‘ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ’ ಸೇರಿದಂತೆ ವಿವಿಧ ಭಜನಾ ಕೀರ್ತನೆಗಳನ್ನು ಅಭ್ಯಾಸ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ, ಶ್ರೀಧಾಮ, ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಭಜನಾ ಕಮ್ಮಟ ಪರಿಷತ್‌ನ ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಐಶ್ವರ್ಯ ನಿಶ್ಚಲ್ ಜೈನ್, ಭಜನಾ ಕಮ್ಮಟ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ವೀರು ಶೆಟ್ಟಿ, ಸಮಿತಿಯ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
























