ಕರಾವಳಿ

ಮಂಗಳೂರು: ಸಭಾಂಗಣದ ಆವರಣ ಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ; ಓರ್ವನ ಸ್ಥಿತಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ನಗರದ ಎಮ್ಮೆಕೆರೆಯ ರಮಾಲಕ್ಷ್ಮೀ ನಾರಾಯಣ ಕನ್ವೆನ್ಶನ್ ಸಭಾಂಗಣದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಆವರಣ ಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸೆ.26ರಂದು ನಡೆದಿದೆ.

gl

ಶನಿವಾರ ಮಧ್ಯಾಹ್ನ ಚುನಾವಣೆ ಮುಗಿದು ವಿಜೇತರ ಘೋಷಣೆ ಬಳಿಕ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಭಾಂಗಣದ ಮೊದಲ ಮಹಡಿಯ ಪ್ಯಾಸೇಜ್‌ನ ತಡೆಗೋಡೆಗೆ ಹಲವು ವಿದ್ಯಾರ್ಥಿಗಳು ಒರಗಿಕೊಂಡಿದ್ದರು ಎನ್ನಲಾಗಿದೆ. ಏಕಾಏಕಿ ತಡೆಗೋಡೆ ಕುಸಿದು ಕೆಳಗೆ ಬಿದ್ದ ಪರಿಣಾಮ, ಮೂವರು ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಕೆಳಭಾಗದಲ್ಲಿ ನಿಂತಿದ್ದ ಮತ್ತೋರ್ವ ವಿದ್ಯಾರ್ಥಿಗೂ ಗಾಯವಾಗಿದ್ದು, ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಳೆಯಂಗಡಿ ನಿವಾಸಿ ಮಹಮ್ಮದ್ ಶಮಾಝ್ (16), ಸೂರಿಂಜೆ ನಿವಾಸಿ ಮುಹಮ್ಮದ್ ಶನಾನ್ ಅಹ್ಮದ್ (18), ಅಡ್ಯಾರ್ ನಿವಾಸಿ ಹನೀಫ್ (23), ಕಾವೂರು ಗಾಂಧಿನಗರ ನಿವಾಸಿ ದಾವೂದ್ ಫರ್ಸಿನ್ ಅಹ್ಮದ್ (18) ಗಾಯಗೊಂಡವರಾಗಿದ್ದಾರೆ.

ಗಾಯಾಳುಗಳ ಪೈಕಿ ಮಹಮ್ಮದ್ ಶಮಾಝ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರು ಎನ್ನಲಾಗಿದೆ. ತಡೆಗೋಡೆ ಕುಸಿದ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts