ಮಂಗಳೂರು: ಕರಾವಳಿ ಕರ್ನಾಟಕದ ಶೈಕ್ಷಣಿಕ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿ ‘ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್’ ಹಾಗೂ ಅದರ ನೂತನ ಲರ್ನಿಂಗ್ ಸೆಂಟರ್ ಶುಕ್ರವಾರ ಕದ್ರಿ ಮಲ್ಲಿಕಟ್ಟೆ ರಸ್ತೆಯ ಸಿವಿ ನಾಯಕ್ ಹಾಲ್ ಮುಂಭಾಗದ ಲೋಟಸ್ ಬಿಲ್ಡಿಂಗ್ನಲ್ಲಿ ಶುಭಾರಂಭಗೊಂಡಿತು.
ತಂತ್ರಜ್ಞಾನ, ಶಿಕ್ಷಣ, ಸಂವಹನ ಹಾಗೂ ಏವಿಯೇಷನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಜನರಿಗೆ ಗುಣಮಟ್ಟದ ತರಬೇತಿ ಮತ್ತು ವೃತ್ತಿಪರ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಗಿದೆ. ‘ಅಪ್ಟೆಕ್ ಲರ್ನಿಂಗ್’ ಹಾಗೂ ‘ಅವಾಲಾನ್ ಅಕಾಡೆಮಿ’ ಸಹಯೋಗದೊಂದಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಶಾರದಾ ಸಮೂಹ ಸಂಸ್ಥೆಗಳ ಸಹ-ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅವರು ‘ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್’ ಮತ್ತು ಲರ್ನಿಂಗ್ ಸೆಂಟರ್ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್ನ ಶುಭಾರಂಭವು ಜಗದೀಶ್ ಪಾಂಚಾಲ್, ಡಾ. ಮಮತಾ ಪಾಂಚಾಲ್, ಡಾ. ನಾಗಶ್ರೀ ಪಾಂಚಾಲ್, ಡಾ. ಗಿರೀಶ್ ಪಾಂಚಾಲ್ ಹಾಗೂ ಅವರ ಕುಟುಂಬದ ಉದ್ಯಮಶೀಲ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದರು.
ಯುವಜನರಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಪ್ರಾಯೋಗಿಕ ಜ್ಞಾನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಒದಗಿಸುವ ಮೂಲಕ ಜಾಗತಿಕ ಮಟ್ಟದ ಅವಕಾಶಗಳನ್ನು ಪಡೆಯಲು ಈ ಸಂಸ್ಥೆ ದಾರಿದೀಪವಾಗಲಿ ಎಂದು ಅವರು ಆಶಿಸಿದರು.
ಏವಿಯೇಷನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಕೇಂದ್ರವು ಹೊಸ ಅವಕಾಶಗಳನ್ನು ಒದಗಿಸಲಿದೆ. ಪಾಂಚಾಲ್ ಕುಟುಂಬದ ಶ್ರಮ ಮತ್ತು ಕನಸುಗಳು ಯಶಸ್ವಿಯಾಗಿ, ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.
ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಉಪನ್ಯಾಸಕ ಸಿಎ. ಎಸ್.ಎಸ್. ನಾಯಕ್ ಅವರು ನೂತನ ‘ಏವಿಯೇಷನ್ ಟ್ರೈನಿಂಗ್ ಮಾಕ್ ಲ್ಯಾಬ್’ ಅನ್ನು ಲೋಕಾರ್ಪಣೆಗೊಳಿಸಿದರು. ವಿದ್ಯಾರ್ಥಿಗಳನ್ನು ಪ್ರಾಯೋಗಿಕ ತರಬೇತಿಯ ಮೂಲಕ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಸಜ್ಜುಗೊಳಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಅರುಣ್ ಶ್ಯಾಮ್, ಹೆಚ್.ಆರ್. ಜೋಶಿ, ಸಾಫ್ಟ್ವೇರ್ ಡೆವಲಪರ್ ಸುಶಾಂತ್ ರೈ, ಡಾ. ಜಗದೀಶ್ ಪಾಂಚಾಲ್, ಡಾ. ಮಮತಾ ಪಾಂಚಾಲ್, ಡಾ. ಗಿರೀಶ್ ಪಾಂಚಾಲ್, ಡಾ. ನಾಗಶ್ರೀ ಪಾಂಚಾಲ್ ಸೇರಿದಂತೆ ಹಲವು ಗಣ್ಯರು ಹಾಗೂ ಶಿಕ್ಷಣ ಮತ್ತು ತಾಂತ್ರಿಕ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ತಂತ್ರಜ್ಞಾನ, ಶಿಕ್ಷಣ, ಸಂವಹನ ಮತ್ತು ಏವಿಯೇಷನ್ ಕ್ಷೇತ್ರಗಳಲ್ಲಿ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ತರಬೇತಿ ಈ ಸಂಸ್ಥೆಯ ಮೂಲಕ ದೊರೆಯಲಿದೆ. ಯುವಜನರು ತಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳತ್ತ ಹೆಜ್ಜೆ ಇಡಲು ಇದು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

























