ಕರಾವಳಿ

ಮಂಗಳೂರು: ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು – ಆಯೋಜಕ, ಕಟ್ಟಡ ಮಾಲೀಕನ ವಿರುದ್ಧ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಸೆ.27: ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ರಮಾ ಲಕ್ಷ್ಮೀ ನಾರಾಯಣ ಹಾಲ್‌ನ ಮೊದಲ ಮಹಡಿಯ ತಡೆಗೋಡೆ ಕುಸಿದು 16 ವರ್ಷದ ವಿದ್ಯಾರ್ಥಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಕಾರ್ಯಕ್ರಮದ ಆಯೋಜಕ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದ ಮೊಹಿದೀನ್ ಶಮ್ಯಾಸ್ (16) ಎಂದು ಗುರುತಿಸಲಾಗಿದೆ.

ಸೆ.26ರಂದು ಮಧ್ಯಾಹ್ನ ರಮಾ ಲಕ್ಷ್ಮೀ ನಾರಾಯಣ ಹಾಲ್‌ನಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ (ಆಲ್ ಕಾಲೇಜ್ ಸ್ಟೂಡೆಂಟ್ ಅಸೋಸಿಯೇಷನ್) ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳ ಆಯ್ಕೆ ಸಂಬಂಧ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ರ‍್ಯಾಲಿ ನಡೆಸುತ್ತಿದ್ದು, ಹಲವರು ಮೊದಲ ಮಹಡಿಯ ಪ್ಯಾಸೇಜ್‌ನಲ್ಲಿ ನಿಂತು ರ‍್ಯಾಲಿಯನ್ನು ವೀಕ್ಷಿಸುತ್ತಿದ್ದರು.

ಈ ಸಂದರ್ಭ ಮಧ್ಯಾಹ್ನ ಸುಮಾರು 2.50ಕ್ಕೆ ಪ್ಯಾಸೇಜ್‌ನ ತಡೆಗೋಡೆ ಏಕಾಏಕಿ ಕುಸಿದಿದೆ. ತಡೆಗೋಡೆಯ ಅವಶೇಷಗಳು ಕೆಳಗೆ ನಿಂತಿದ್ದ ಮೊಹಿದೀನ್ ಶಮ್ಯಾಸ್ ಅವರ ತಲೆಯ ಮೇಲೆ ಬಿದ್ದಿದ್ದು, ಅವರ ತಲೆ, ಎರಡೂ ಕಾಲು ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಮೊಹಮ್ಮದ್ ಸನಾನ್, ಅಹ್ಮದ್ ಮೊಹಮ್ಮದ್ ಹನೀಫ್ ಹಾಗೂ ದಾವೂದ್ ಎಂಬ ವಿದ್ಯಾರ್ಥಿಗಳಿಗೂ ಗಾಯಗಳಾಗಿವೆ.

ಗಾಯಾಳುಗಳನ್ನು ವಿದ್ಯಾರ್ಥಿಗಳು ಕಾರಿನಲ್ಲಿ ಐಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೊಹಿದೀನ್ ಶಮ್ಯಾಸ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11.33ಕ್ಕೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿ ಮೃತ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಇಲಿಯಾಸ್ ಮೊಹಿದಿನಬ್ಬ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಕ್ರಮ ನಡೆಸಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅವಕಾಶ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂಬುದು ತಿಳಿದಿದ್ದರೂ ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಅವರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಕಾರ್ಯಕ್ರಮದ ಆಯೋಜಕ ದಿನಕರ್ ಶೆಟ್ಟಿ ಅವರಿಗೂ ಕಟ್ಟಡದ ಸ್ಥಿತಿಗತಿ ತಿಳಿದಿದ್ದರೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕ ದಿನಕರ್ ಶೆಟ್ಟಿ ಹಾಗೂ ಕಟ್ಟಡದ ಮಾಲೀಕ ಪರೀಕ್ಷಿತ್ ರೈ ವಿರುದ್ಧ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸುಳ್ಯದ ಇಬ್ಬರ ಸಾವು ಪ್ರಕರಣ: ಅನಧಿಕೃತವಾಗಿ ವಿದ್ಯುತ್ ಅಳವಡಿಸಿದ್ದ ತೋಟದ ಮಾಲಕರ ವಿರುದ್ಧ ಪ್ರಕರಣ ದಾಖಲು!!

ಸುಳ್ಯ: ವಿದ್ಯುತ್ ಪ್ರವಹಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ತೋಟದ ಮಾಲಕರ ವಿರುದ್ಧ ಬೆಳ್ಳಾರೆ…