tamanvi
ಕರಾವಳಿ

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು ಬಾಹಿರವಾಗಿ ಬಂದ್ ಗೆ ಕರೆ ನೀಡಲಾಗಿತ್ತು. ಇದೀಗ ಪುತ್ತೂರು ಚಲೋ ಮಾಡಲು ಹೊರಟಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಬಾರದು ಎಂದು ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಆಗ್ರಹಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಬರ್ ಅಂಗಡಿಯಲ್ಲಿ ನಡೆದ ಘಟನೆಗೆ ನಾಳೆಗೆ ಒಂದು ವಾರ. ಸಣ್ಣ ಘಟನೆ ಇಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರು ದಿನಕ್ಕೊಬ್ಬರಂತೆ ಬಂದು ಪುತ್ತೂರಿನ ಶಾಂತಿಗೆ ಕೊಳ್ಳಿ ಇಡುವ ಕೆಲಸ ಮಾಡ್ತಾ ಇದ್ದಾರೆ. ಘಟನೆಯ ಲಾಭ ತೆಗೆದುಕೊಳ್ಳಲು ಹಂತ ಹಂತವಾಗಿ ಕೆಲಸ ನಡೆಸ್ತಾ ಇದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

ಪುತ್ತೂರು ಚಲೋ ಮಾಡ್ತಾ ಇರುವ ಉದ್ದೇಶ ಏನು? ಗೋ ಮೂತ್ರ ಕುಡಿದು ಇವರ ತಲೆಯಲ್ಲೇನು ಸೆಗಣಿ ತುಂಬಿದೆಯೇ? ಚಲೋ ಮಾಡುವವರು ಜಗನ್ನಿವಾಸ್ ರಾವ್ ಮನೆಗೆ ಚಲೋ ಮಾಡಲಿ. ಒಂದು ಹೆಣ್ಣು ಮಗುವಿನ ಬಾಳನ್ನು ಹಾಳು ಮಾಡಿದ್ದು, ಆಕೆಯ ತಾಯಿ ಕಣ್ಣೀರು ಹಾಕ್ತಾ ಇದ್ದಾರೆ. ಸುರತ್ಕಲ್ ನಲ್ಲಿ ಒಂದು ಹೆಣ್ಣು ಮಗುವಿಗೆ ಅನ್ಯಾಯ ಆಗಿದೆ. ಅಲ್ಲಿಗೆ ಚಲೋ ಮಾಡಲಿ. ಧರ್ಮಸ್ಥಳದ ಸೌಜನ್ಯ ಮನೆಗೆ ಚಲೋ ಮಾಡಲಿ ಎಂದರು.

ಹಿಂದೂ ಸಮಾಜ ಜಾಗೃತವಾಗಬೇಕು ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳುತ್ತಾರೆ. ಜಾಗೃತರಾಗುವುದು ಎಂದರೆ ಏನು? ಶಾಲಾ ಬಸ್ಸಿಗೆ ಇನ್ಶೂರೆನ್ಸ್ ಮಾಡಿ, ಮಕ್ಕಳ ಜೀವಕ್ಕೆ ರಕ್ಷಣೆ ನೀಡುವ ಜಾಗೃತಿಯ ಕೆಲಸವನ್ನು ಅವರು ಮೊದಲು ಮಾಡಬೇಕಾಗಿದೆ ಎಂದರು. ಜಗದೀಶ್ ಕಾರಂತ್ ಅವರ ಇತಿಹಾಸ ನಮಗೆ ತಿಳಿದಿದೆ. ಸುರತ್ಕಲ್ ನಲ್ಲಿ ಕೋಮು ಗಲಭೇ ಆಗಲು ಇವರೇ ಕಾರಣ ಎಂದರು.

ಪುತ್ತೂರಿನ ಶಾಸಕರೇಕೆ ಮೌನ?

ಕ್ಯಾಮರಾಮೆನ್ ಕರೆದುಕೊಂಡು ಹೋಗಿ ವರದಿ ಮಾಡುವ ಶಾಸಕರ ಕ್ಯಾಮರಾಮೆನ್ ಈಗ ಎಲ್ಲಿ ಹೋಗಿದ್ದಾರೆ? ಕ್ಯಾಮರಾದ ಬ್ಯಾಟರಿ ಮುಗಿಯಿತೇ? ಅವರು ತನ್ನ ಹಳೆಯ ಸಂಘಕ್ಕೆ ನಿಷ್ಠರಾಗಿದ್ದಾರೆಯೇ? ಐಜಿಗೆ ಪತ್ರ ಬರೆದು, ಹೋಂ ಮಿನಿಸ್ಟರಿಗೆ ಒತ್ತಡ ತರುವ ಕೆಲಸವನ್ನೂ ಶಾಸಕರು ಮಾಡಿಲ್ಲ. ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತದಿಂದಲೇ ಗೆದ್ದು ಬಂದಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಬೇಕು. ಶಾಸಕರ ಪರ ನಿಲ್ಲುವ ಪುತ್ತೂರಿನ ಅಲ್ಪಸಂಖ್ಯಾತ ನಾಯಕರು ಈ ಬಗ್ಗೆ ಧ್ವನಿ ಎತ್ತಬೇಕು ಎಂದರು.

ಶಾಂತಿ ಭಂಗಕ್ಕೆ ಯತ್ನ:

ಬಂದ್ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಸುಪ್ರೀಂ ಕೋರ್ಟ್ ಹೇಳಿದ್ದರೂ ಬಂದ್ ಗೆ ಕರೆ ನೀಡಿದ್ದಾರೆ. ಇದೀಗ ಪುತ್ತೂರು ಚಲೋ ಮಾಡುವ ಮೂಲಕ ಶಾಂತಿ ಭಂಗಕ್ಕೆ ಯತ್ನ ಮಾಡುತ್ತಿದ್ದಾರೆ. ಇದರ ನಡುವಲ್ಲಿ, ನಳಿನ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಏನೇನೋ ಬರಿತಾ ಇದ್ದಾರೆ. ಹಿಂದೂ ಮುಸ್ಲಿಂರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಾ ಇದ್ದಾರೆ. ಎಂಎಲ್.ಸಿ. ಕಿಶೋರ್ ಕುಮಾರ್, ಮಾಜಿ ಶಾಸಕ ಸಂಜೀವ ಮಠಂದೂರು ಬೆಂಕಿ ಹಚ್ಚುವ ಕೆಲಸ ಮಾಡ್ತಾ ಇದ್ದಾರೆ. ಬ್ರಿಜೇಶ್ ಚೌಟ, ಶೋಭಾ ಕರಂದ್ಲಾಜೆ, ನಳಿನ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾದರೆ ಪುತ್ತೂರಿನ‌ ಪರಿಸ್ಥಿತಿ ಏನಾಗಬಹುದು? ಸೌಮ್ಯ ಭಟ್ ಕೊಲೆ ಪ್ರಕರಣದ ಬಳಿಕ ಅಂತಹ ದೊಡ್ಡ ಗಲಾಟೆ ನಡೆದಿಲ್ಲ. ಇಂತಹ ಗಲಾಟೆ ನಡೆಸಲು ಮತ್ತೊಮ್ಮೆ ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆ ಹಿಂದೂ ಬಾಂಧವರು ಅವಕಾಶ ನೀಡಬಾರದು ಎಂದರು.

ಪುತ್ತೂರಿನ ಶಾಂತಿಯನ್ನು ಕದಡುವ ಹುನ್ನಾರ, ಷಡ್ಯಂತ್ರ ನಡಿತಾ ಇದೆ. ಹಿಂದೂ ಬಾಂಧವರು ಅರ್ಥ ಮಾಡಿಕೊಳ್ಳಬೇಕು. ಗಲಾಟೆ, ಬಂದ್ ನಡೆದರೆ ಸಂಕಷ್ಟ ಅನುಭವಿಸುವವರು ನಾವೆಲ್ಲರೂ. ಹಾಗಾಗಿ ಅಂತಹ ಘಟನೆಗಳಿಗೆ ಅವಕಾಶ ನೀಡುವುದು ಬೇಡ. ಚುನಾವಣೆ ಸಮೀಪ ಬರುತ್ತಿದ್ದಂತೆ ಇಂತಹ ಚಲೋ, ಸಮಾಜೋತ್ಸವ ಹಮ್ಮಿಕೊಳ್ತಾರೆ. ಇಂತಹ ಕಾರ್ಯಕ್ರಮಗಳ ಬಳಿಕ ಕೋಮು ಗಲಭೆ ನಡೆದ ಉದಾಹರಣೆ ತುಂಬಾ ಇದೆ. ಹಾಗಾಗಿ ಪುತ್ತೂರು ಚಲೋಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಸೌಹಾರ್ದ ಚಲೋಗೆ ಬೆಂಬಲ:

ಮಾರ್ಚ್ 31ರಂದು ಸೌಹಾರ್ದ ಚಲೋ ಹಮ್ಮಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ, ಕಾರ್ಯಕ್ರಮ ಆಯೋಜನೆಯ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಪುತ್ತೂರಿನ ಸೌಹಾರ್ದಕ್ಕಾಗಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂತಹ ಸೌಹಾರ್ದ ಕಾರ್ಯಕ್ರಮ ಯಾರೇ ಹಮ್ಮಿಕೊಂಡರೂ ನಾವು ಬೆಂಬಲ ನೀಡ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದೀಕ್, ಶಾಕೀರ್ ಅಳಕೆಮಜಲು, ಅಶ್ರಫ್ ಬಾವು, ಅಬ್ದುಲ್ ಕಲಾಂ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…

ಕಾಳುಮೆಣಸು ಬೆಳೆಗಾರರಿಗೆ ಗುಡ್‌ನ್ಯೂಸ್; ವಿವಿಧ ಯೋಜನೆಗಳಡಿ ಆರ್ಥಿಕ ನೆರವು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಆರ್ಥಿಕ ನೆರವು…