ಮಂಗಳೂರು – ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿಗೆ ಬಂಟ್ವಾಳದಲ್ಲೂ ನಿಲುಗಡೆ ನೀಡುವಂತೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ನೀಡಲಾಗಿದೆ.
ಪುತ್ತೂರಿನ ಸಂಪ್ಯ ನಿವಾಸಿ ಧನುಷ್ ಅವರು ಬಂಟ್ವಾಳ ರೈಲ್ವೇ ನಿಲ್ದಾಣದ ವ್ಯವಸ್ಥಾಪಕರ ಮೂಲಕ ಮನವಿ ನೀಡಿದ್ದಾರೆ. ಬಂಟ್ವಾಳ ರೈಲ್ವೆ ನಿಲ್ದಾಣವು ಬಿ.ಸಿ. ರೋಡ್, ಪಾಣೆಮಂಗಳೂರು, ವಿಟ್ಲ, ಕಲ್ಲಡ್ಕ, ಮಾಣಿ, ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾದ ರೈಲ್ವೆ ನಿಲ್ದಾಣವಾಗಿದೆ. ಬೆಂಗಳೂರು ಮತ್ತು ಹಾಸನ ಭಾಗಗಳಿಗೆ ಪ್ರತಿದಿನ ಪ್ರಯಾಣಿಸುವ ನೂರಾರು ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ತೆರಳುವ ಸಾರ್ವಜನಿಕರು ಈ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಪ್ರಸ್ತುತ ಈ ಭಾಗದ ಜನರು ರೈಲು ಹಿಡಿಯಲು ಮಂಗಳೂರು ಜಂಕ್ಷನ್ ಅಥವಾ ಕಬಕ ಪುತ್ತೂರು ನಿಲ್ದಾಣಗಳಿಗೆ ಹೋಗಬೇಕಾಗಿರುವುದರಿಂದ ಹೆಚ್ಚುವರಿ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಆದ್ದರಿಂದ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾದ ಬಂಟ್ವಾಳದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಕೇವಲ 2 ನಿಮಿಷಗಳ ನಿಲುಗಡೆ ನೀಡುವುದರಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಟಿಕೆಟ್ ಆದಾಯ ಬರಲಿದೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಮಂಗಳೂರು – ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
















