ಪುತ್ತೂರು: ಗ್ರಾಮೀಣ ಕುಶಲಕರ್ಮಿಗಳ ಬದುಕಿಗೆ ಆಸರೆಯಾಗಿ, ಸಾಂಪ್ರದಾಯಿಕ ಕುಂಬಾರಿಕೆ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಸುದೀರ್ಘ ಕಾಲದಿಂದ ಶ್ರಮಿಸುತ್ತಿರುವ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಗೌರವ ಒಲಿದು ಬಂದಿದೆ. ಸಹಕಾರಿ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಯನ್ನು ಗುರುತಿಸಿ ಸಂಘವನ್ನು ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುಮಾರು 69 ವರ್ಷಗಳ ಪರಂಪರೆ ಹೊಂದಿರುವ ಈ ಸಂಘವು ಕುಂಬಾರಿಕೆ ವೃತ್ತಿಯ ಉತ್ತೇಜನ, ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣಕ್ಕೆ ನಿರಂತರವಾಗಿ ಕೊಡುಗೆ ನೀಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ 18 ಶಾಖೆಗಳನ್ನು ಹೊಂದಿರುವ ಸಂಘವು ತನ್ನ ಕಾರ್ಯಚಟುವಟಿಕೆಗಳ ಮೂಲಕ ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದೆ.
ಸಾಂಪ್ರದಾಯಿಕ ಕುಂಬಾರಿಕೆ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ವೃತ್ತಿಪರ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ಕುಂಬಾರಿಕೆ ಉತ್ಪಾದನಾ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಕುಂಬಾರಿಕೆ ಉತ್ಪನ್ನಗಳ ತಯಾರಿಕೆಯೊಂದಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಇಂತಹ ಉತ್ಪಾದನಾ ಮತ್ತು ತರಬೇತಿ ವ್ಯವಸ್ಥೆಯನ್ನು ಹೊಂದಿರುವ ರಾಜ್ಯದ ಏಕೈಕ ಸಹಕಾರಿ ಸಂಸ್ಥೆ ಎಂಬ ವಿಶೇಷ ಹೆಗ್ಗಳಿಕೆಯೂ ಸಂಘಕ್ಕಿದೆ.
73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸಾಂಪ್ರದಾಯಿಕ ಕುಂಬಾರಿಕೆ ಉದ್ಯಮಕ್ಕೆ ಹೊಸ ಆಯಾಮ ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಬಲ ತುಂಬುತ್ತಿರುವ ಸಂಸ್ಥೆಯ ಸಾಧನೆಗೆ ಸಂದಿರುವ ಈ ಗೌರವವು ಕುಂಬಾರಿಕೆ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಪ್ರೇರಣೆ ನೀಡಲಿದೆ.






















