ಕರಾವಳಿ

ಮಂಗಳೂರು ಪಿಲಿಕುಳ ನಿಸರ್ಗಧಾಮ ಶೀಘ್ರವೇ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರ’: ಸಚಿವ ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಪಿಲಿಕುಳ ನಿಸರ್ಗಧಾಮವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರು ಹಾಗೂ ರೈತರ ಗೊಂದಲ ನಿವಾರಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೇ ಕಾರ್ಯ ನಡೆಯುತ್ತಿದ್ದು, ಮುಂದಿನ ಮೂರು ತಿಂಗಳೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಸಮೀಕ್ಷೆ ಪೂರ್ಣಗೊಳ್ಳಲಿದೆ.

ಜಂಟಿ ಸರ್ವೇ ವರದಿ ಸಲ್ಲಿಕೆಯಾದ ಬಳಿಕ ಅರಣ್ಯ ಇಲಾಖೆಗೆ ಸೇರಬೇಕಾದ ಭೂಮಿ ಯಾವುದು ಮತ್ತು ಕಂದಾಯ ಇಲಾಖೆ ಅಥವಾ ಸಾರ್ವಜನಿಕರ ಬಳಕೆಗೆ ಬಿಡಬೇಕಾದ ಜಾಗ ಯಾವುದು ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ. ಸರ್ವೇ ಮುಗಿದ ಬಳಿಕ ಅಲ್ಲಿನ ನಿವಾಸಿಗಳು ಮತ್ತು ರೈತರಿಗೆ ಯಾವುದೇ ತೊಂದರೆಯಾಗದಂತೆ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕಸ್ತೂರಿರಂಗನ್ ವರದಿ- ಜನವಸತಿ ಪ್ರದೇಶಗಳಿಗೆ ಸಂಪೂರ್ಣ ವಿನಾಯಿತಿ:

ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಆರು ಬಾರಿ ತಿರಸ್ಕರಿಸಿದ್ದು, ಇದೀಗ ೭ನೇ ಬಾರಿಗೆ ಬಂದಿರುವ ಪ್ರಸ್ತಾವನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಹಾಗೂ ನಿಖರವಾದ ಭೌತಿಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಉನ್ನತ ಸಮಿತಿಗಳ ರಚನೆ:

ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆಸಿದ ಸಮೀಕ್ಷಾ ವರದಿಗಳನ್ನು ಕೇಂದ್ರಕ್ಕೆ ಸಮರ್ಪಕವಾಗಿ ಸಲ್ಲಿಸಿರಲಿಲ್ಲ. ಆ ಲೋಪಗಳನ್ನು ಸರಿಪಡಿಸಿ ಈ ಬಾರಿ ಅತ್ಯಂತ ಪಾರದರ್ಶಕವಾಗಿ ಸಮೀಕ್ಷೆ ನಡೆಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಹಾಗೂ ರಾಜ್ಯ ಮಟ್ಟದಲ್ಲಿ ನಿವೃತ್ತ ನ್ಯಾಯಾಧೀಶರು ಅಥವಾ ತಾಂತ್ರಿಕ ಮತ್ತು ಪರಿಸರ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು. ಈ ಕಡತವನ್ನು ಅನುಮೋದನೆಗಾಗಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ.

ಕೃಷಿ ಭೂಮಿ, ತೋಟಗಳಿಗೆ ರಕ್ಷಣೆ:

ಜನವಸತಿ ಪ್ರದೇಶಗಳು, ಕೃಷಿ ಜಮೀನು, ತೋಟಗಳು, ಮನೆಗಳು ಹಾಗೂ ಶಾಲಾ-ಕಾಲೇಜುಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಕೈಬಿಡಲಾಗುವುದು. ಕೇವಲ ನೈಜ ಅರಣ್ಯ ಪ್ರದೇಶವನ್ನು ಮಾತ್ರ ಗುರುತಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ಕೋರಲಾಗಿದ್ದು, ಈಗಾಗಲೇ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts