ಪುತ್ತೂರು: ಧಾರ್ಮಿಕ ಶ್ರದ್ಧೆ, ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಪಂಚಮುಖಿ ಆಂಜನೇಯ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ನ.26ರಂದು ಅದ್ಧೂರಿ ಚಾಲನೆ ದೊರೆಯಿತು. ನೂರಾರು ವಾಹನಗಳಲ್ಲಿ ಆಗಮಿಸಿದ ಹಸಿರು ಹೊರೆಕಾಣಿಕೆ, ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಸಂಗ್ರಹಿಸಲಾದ 108 ತೀರ್ಥಕಲಶಗಳು, ಕುಣಿತ ಭಜನೆ ಹಾಗೂ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಈ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮವು ನ.26ರಿಂದ 29ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ದರ್ಬೆ ವೃತ್ತದಿಂದ ತೀರ್ಥಕಲಶ ಹಾಗೂ ಹೊರೆಕಾಣಿಕೆಗಳ ಮೆರವಣಿಗೆ ಆಯೋಜಿಸಲಾಗಿತ್ತು. ಪಂಚಮುಖಿ ಆಂಜನೇಯ ಯಾಗ ಸಮಿತಿಯ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಅವರು ಕೇಸರಿ ಧ್ವಜ ಹಸ್ತಾಂತರಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಾಗ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಗೌರವಾಧ್ಯಕ್ಷ ಸಂಜೀವ ಮಠಂದೂರು, ಗೌರವ ಸಲಹೆಗಾರ ಸಂಜೀವ ನಾಯಕ್ ಕಲ್ಲೇಗ, ಸಂಚಾಲಕ ಕೆ. ಜೀವಂಧರ್ ಜೈನ್ ಸೇರಿದಂತೆ ಸಮಿತಿಯ ವಿವಿಧ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಕುಣಿತ ಭಜನೆ, ಪೂರ್ಣಕುಂಭದೊಂದಿಗೆ ಸಾಗಿದ ಮೆರವಣಿಗೆ
ದರ್ಬೆಯಿಂದ ಆರಂಭವಾದ ಮೆರವಣಿಗೆ ಕಲ್ಲೇಗದ ಶ್ರೀ ಕಲ್ಕುಡ ದೈವಸ್ಥಾನದ ಬಳಿ ತಲುಪುತ್ತಿದ್ದಂತೆ ಭಕ್ತಿಪೂರ್ವಕ ಸ್ವಾಗತ ನೀಡಲಾಯಿತು. ವಿವಿಧ ಭಜನಾ ತಂಡಗಳ ಕುಣಿತ ಭಜನೆ ಮೆರವಣಿಗೆಗೆ ವಿಶೇಷ ಆಕರ್ಷಣೆ ನೀಡಿದರೆ, ಮಹಿಳೆಯರು ಪೂರ್ಣಕುಂಭದೊಂದಿಗೆ ತೀರ್ಥಕಲಶ ಹೊತ್ತ ಭಕ್ತರನ್ನು ಬರಮಾಡಿಕೊಂಡರು.
ಬಳಿಕ ಭಕ್ತರು ಕಾಲ್ನಡಿಗೆಯಲ್ಲಿ ನೆಲಪ್ಪಾಲು ಕ್ಷೇತ್ರದತ್ತ ಸಾಗಿದರು. ಮಾರ್ಗದುದ್ದಕ್ಕೂ ಭಜನಾ ತಂಡಗಳ ಭಕ್ತಿಗೀತೆ, ಕುಣಿತ ಭಜನೆ ಹಾಗೂ ಜಯಘೋಷಗಳು ಧಾರ್ಮಿಕ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ವಿವಿಧ ಗ್ರಾಮಗಳ ಧಾರ್ಮಿಕ ಕ್ಷೇತ್ರಗಳಿಂದ ಆಗಮಿಸಿದ 108 ತೀರ್ಥಕಲಶಗಳನ್ನು ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಲಾಯಿತು.
ಕ್ಷೇತ್ರವನ್ನು ತಲುಪಿದ ಬಳಿಕ ಮಹಿಳೆಯರು ತೀರ್ಥಕಲಶಗಳನ್ನು ಹೊತ್ತು ವೀರಾಂಜನೇಯ ಸ್ವಾಮಿಯ ವಿಗ್ರಹಕ್ಕೆ ಪ್ರದಕ್ಷಿಣೆ ಸಲ್ಲಿಸಿದರು. ನಂತರ ವಿಶೇಷವಾಗಿ ಅಲಂಕರಿಸಲಾದ ವೇದಿಕೆಯಲ್ಲಿ 108 ತೀರ್ಥಕಲಶಗಳನ್ನು ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಿ, ಅರ್ಚಕರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ತಾಲೂಕಿನ ವಿವಿಧ ಧಾರ್ಮಿಕ ಕ್ಷೇತ್ರಗಳ ತೀರ್ಥಕಲಶಗಳು ಒಂದೇ ವೇದಿಕೆಯಲ್ಲಿ ಸಮಾಗಮಗೊಂಡಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಹಸಿರು ಹೊರೆಕಾಣಿಕೆಯಿಂದ ಉಗ್ರಾಣ ತುಂಬಿಸಿದ ಭಕ್ತರು
ತೀರ್ಥಕಲಶ ಪೂಜೆಯ ಬಳಿಕ ರಾತ್ರಿ ಹವನದ ಉಗ್ರಾಣ ಮುಹೂರ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಯಾಗ ಸಮಿತಿಯ ಸಂಚಾಲಕ ಕೆ. ಜೀವಂಧರ್ ಜೈನ್ ಅವರು ಉಗ್ರಾಣ ಮುಹೂರ್ತ ನೆರವೇರಿಸಿದರೆ, ಡಾ. ರವೀಶ ಪಡುಮಲೆ ಅವರು ಅಕ್ಷಯ ಪಾತ್ರೆಗೆ ಅಕ್ಕಿ ತುಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹವನದ ಪೂರ್ವಸಿದ್ಧತೆಗಾಗಿ ಭಕ್ತರು ಅಕ್ಕಿ, ತರಕಾರಿ ಸೇರಿದಂತೆ ವಿವಿಧ ಅಗತ್ಯ ಸಾಮಗ್ರಿಗಳನ್ನು ಹೊರೆಕಾಣಿಕೆಯ ರೂಪದಲ್ಲಿ ಸಮರ್ಪಿಸಿದರು. ನೂರಾರು ವಾಹನಗಳಲ್ಲಿ ಆಗಮಿಸಿದ ಹಸಿರು ಹೊರೆಕಾಣಿಕೆ ಕ್ಷೇತ್ರದ ಉಗ್ರಾಣವನ್ನು ತುಂಬಿಸಿತು. ಭಕ್ತರು ಸ್ವಯಂಪ್ರೇರಿತರಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮದ ಸಾಮೂಹಿಕ ಸಹಭಾಗಿತ್ವಕ್ಕೆ ಸಾಕ್ಷಿಯಾಯಿತು.
‘ರಾಮ ರಾಮ ಶ್ರೀರಾಮ’ ಯಕ್ಷಗಾನ ಪ್ರದರ್ಶನ
ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ವೈಭವಕ್ಕೂ ವೇದಿಕೆ ಕಲ್ಪಿಸಲಾಗಿತ್ತು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ‘ರಾಮ ರಾಮ ಶ್ರೀರಾಮ’ ಎಂಬ ಯಕ್ಷಗಾನ ಬಯಲಾಟವನ್ನು ಪ್ರಸ್ತುತಪಡಿಸಿದರು.
ಪ್ರಸಂಗದ ಭಾಗವಾಗಿ ಪಂಚವಟಿ, ಇಂದ್ರಜಿತು ಕಾಳಗ, ಕುಂಭಕರ್ಣ ಕಾಳಗ ಹಾಗೂ ರಾವಣ ವಧೆ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರದರ್ಶನಕ್ಕೂ ಮುನ್ನ ಚೌಕಿ ಪೂಜೆ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರಿಗೆ ಉಪಾಹಾರದ ವ್ಯವಸ್ಥೆಯನ್ನೂ ಆಯೋಜಕರು ಮಾಡಿದ್ದರು.
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನೆಲಪ್ಪಾಲು
ಪಂಚಮುಖಿ ಆಂಜನೇಯ ಹವನದ ಪ್ರಯುಕ್ತ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ನೆಹರುನಗರದಲ್ಲಿ ಭವ್ಯ ಸ್ವಾಗತ ಕಮಾನು ನಿರ್ಮಿಸಲಾಗಿದ್ದು, ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಕೇಸರಿ ಬಂಟಿಂಗ್ಸ್ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ದೀಪಾಲಂಕಾರದಿಂದ ಕ್ಷೇತ್ರದ ಪರಿಸರವು ಹಬ್ಬದ ಕಳೆಯನ್ನು ಪಡೆದುಕೊಂಡಿದೆ.
ಭಕ್ತರ ಅನುಕೂಲಕ್ಕಾಗಿ ವಿಶಾಲ ಪೆಂಡಾಲ್ ಹಾಗೂ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನ.29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಮುಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.





















