ಬೆಂಗಳೂರು: ಬೆಂಗಳೂರು–ಮಂಗಳೂರು–ಕಾರವಾರ–ಮಡಗಾಂವ್ ನಡುವೆ ಸಂಚರಿಸುವ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೈಲಿನ ವೇಗ ಹೆಚ್ಚಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದ ಸದಸ್ಯರಿಗೆ ಮನವಿ ಸಲ್ಲಿಸಿರುವ ಅವರು, ಘಾಟಿ ಪ್ರದೇಶವನ್ನು ಹೊರತುಪಡಿಸಿ ರೈಲು ಸಂಚರಿಸುವ ಇತರ ಮಾರ್ಗಗಳಲ್ಲಿ ಸಾಧ್ಯವಿರುವ ಕಡೆ ವೇಗವನ್ನು ಹೆಚ್ಚಿಸುವಂತೆ ಕೋರಿದ್ದಾರೆ.
ಪ್ರಸ್ತುತ ಬೆಂಗಳೂರು–ಮಡಗಾಂವ್ ನಡುವಿನ ಪ್ರಯಾಣಕ್ಕೆ ಸುಮಾರು 13 ಗಂಟೆಗಳ ಕಾಲಾವಕಾಶ ಬೇಕಾಗುತ್ತಿದೆ. ಆದರೆ ಮಾರ್ಗಮಧ್ಯೆ ಅನಗತ್ಯವಾಗಿ ವಿಳಂಬವಾಗುತ್ತಿರುವ ಸಮಯವನ್ನು ಕಡಿತಗೊಳಿಸಿ, ರೈಲಿನ ಕಾರ್ಯಾಚರಣೆಯನ್ನು ನಿಯಮಾನುಸಾರ ವೇಗಗೊಳಿಸಿದರೆ ಪ್ರಯಾಣದ ಅವಧಿಯನ್ನು ಸುಮಾರು 11 ಗಂಟೆಗಳಿಗೆ ಇಳಿಸಲು ಸಾಧ್ಯವಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಎರಡು ಗಂಟೆಗಳ ಉಳಿತಾಯದ ನಿರೀಕ್ಷೆ
ಹೊಸದಾಗಿ ಆರಂಭಗೊಂಡಿರುವ ವಂದೇ ಭಾರತ್ ರೈಲು ಮಧ್ಯಮ ವರ್ಗದ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಪಡೆಯುತ್ತಿದೆ. ದಿನದಿಂದ ದಿನಕ್ಕೆ ಈ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಘಾಟಿ ಪ್ರದೇಶದ ಭೌಗೋಳಿಕ ಹಾಗೂ ರೈಲ್ವೆ ಸುರಕ್ಷತಾ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು, ಉಳಿದ ಮಾರ್ಗಗಳಲ್ಲಿ ರೈಲಿನ ವೇಗ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಪ್ರಯಾಣಿಕರಿಗೆ ಸುಮಾರು ಎರಡು ಗಂಟೆಗಳ ಸಮಯ ಉಳಿತಾಯವಾಗುವುದರ ಜೊತೆಗೆ ರೈಲಿನ ಸೇವೆಯೂ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಸಂಸದರು ಮನವಿ ಮಾಡಿದ್ದಾರೆ.
ರೈಲ್ವೆ ಇಲಾಖೆ ಈ ಮನವಿಗೆ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.





















