ಬಿ.ಸಿ.ರೋಡ್-ಅಡ್ಡಹೊಳೆ ತನಕದ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸನಿಹದಲ್ಲಿ ಟೋಲ್ ಪ್ಲಾಝಾ ಕಾಮಗಾರಿ ಪೂರ್ಣ ಗೊಂಡಿದ್ದು, ಇದೀಗ ಪರೀಕ್ಷಾ ಸೇವೆ ಆರಂಭಗೊಂಡಿದೆ. ಇನ್ನೇನು ವಾರದ ಒಳಗಾಗಿ ಹೆದ್ದಾರಿ ಪ್ರಾಧಿಕಾರದಿಂದ ಅಧಿಕೃತ ಪ್ರಕಟಣೆ ಆದ ಬಳಿಕ ಶುಲ್ಕ ವಸೂಲಿ ಆರಂಭವಾಗುವ ಸಾಧ್ಯತೆಗಳು ವ್ಯಕ್ತವಾಗಿದೆ.
ಬಿ.ಸಿ. ರೋಡ್ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ಕಾಮಗಾರಿ ಶೇಕಡಾ 95ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್ಗೇಟ್ ನಿರ್ಮಾಣಗೊಂಡಿದೆ. ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ 46 ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್ಆರ್ ಕನ್ಸ್ಟ್ರಕ್ಷನ್ ಟೋಲ್ ಪ್ಲಾಝಾ ಕಾಮಗಾರಿಯನ್ನು ನಿರ್ವಹಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಈಗಾಗಲೇ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.
ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು 8 ಲೇನ್ಗಳಲ್ಲಿ ವಾಹನ ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್ಗಳಿವೆ. ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ ಬೆಂಗಳೂರು ನೆಲಮಂಗಲದಿಂದ ಸಕಲೇಶಪುರ ಮಧ್ಯೆ 5 ಕಡೆ ಟೋಲ್ ಫ್ಲಾಝಾ ಇದೆ. ದ.ಕ. ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್ವೆಲ್ ಮಧ್ಯೆ ಬಿ.ಸಿ. ರೋಡು ಸಮೀಪ ಬ್ರಹ್ಮರಕೂಟ್ಲುನಲ್ಲಿ ಟೋಲ್ ಫ್ಲಾಝಾ ಇದ್ದು, ವಳಾಲುನಲ್ಲಿ ಆರಂಭವಾಗಲಿರುವ ಟೋಲ್ ಫ್ಲಾಝಾ 2ನೇಯದ್ದಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ 7 ಟೋಲ್ ಫ್ಲಾಝಾಗಳಲ್ಲಿ ಶುಲ್ಕ ತೆರಬೇಕಾಗುತ್ತದೆ.
ಸ್ಥಳೀಯ ನಿವಾಸಿಗಳಿಗೆ ಮಾಸಿಕ ಪಾಸ್: ಯಜ್ಞೇಶ್
ಇಕ್ಕಡೆಯ ಒಟ್ಟು 8 ಲೇನ್ಗಳ ಪೈಕಿ ಇಕ್ಕಡೆಯಲ್ಲಿ 6 ಲೈನ್ಗಳು (3+3) ಡೆಡಿಕೇಟೆಡ್ ಲೈನ್ ಆಗಿದ್ದು, ಇದರಲ್ಲಿ ಫಾಸ್ಟ್ ಟೇಗ್ ಇರುವವರು ಮಾತ್ರ ಹೋಗುವಂತದ್ದು, ಇಕ್ಕಡೆಯ 2 ಲೈನ್ಗಳು ಕ್ಯಾಸ್ ಪ್ಲಸ್ ಫಾಸ್ಟ್ ಟ್ಯಾಗ್ಗಳು. ಇವುಗಳಲ್ಲಿ ನಗದು ವ್ಯವಸ್ಥೆ ಇರುವುದಿಲ್ಲ, ಫೋನ್ ಪೇ, ಗೂಗಲ್ ಪೇ ಅಥವಾ ಸ್ಕ್ಯಾನಿಂಗ್ಗೆ ಮಾತ್ರ ಅವಕಾಶ ಇರುತ್ತದೆ. ದ.ಕ. ಜಿಲ್ಲೆಯ ಒಳಗಿನ ನೋಂದಣಿಯ ವಾಹನಗಳಿಗೆ ಶೇಕಡಾ 50ರಷ್ಟು ವಿನಾಯಿತಿ ದರ ನಿಗದಿ ಪಡಿಸಲಾಗಿದೆ. ಶುಂಕ ವಸೂಲಾತಿ ಕೇಂದ್ರದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳಿಗೆ 360 ರೂಪಾಯಿ ಮಾಸಿಕ ಪಾಸ್ ವ್ಯವಸ್ಥೆ ಇರುತ್ತದೆ ಎಂದು ಮಂಗಳೂರು ಕೋರಲ್ ಸಂಸ್ಥೆಯ ಆಡಳಿತ ಪಾಲುದಾರ ಯಜ್ಞೇಶ್ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಹೊರೆ: ಶಬೀರ್ ಅಹಮ್ಮದ್
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಒಂದು ಟೋಲ್ ಪ್ಲಾಝಾದಿಂದ ಇನ್ನೊಂದು ಟೋಲ್ ಪ್ಲಾಝಾಕ್ಕೆ 60 ಕಿ.ಮೀ.ನ ಅಂತರ ಬೇಕು. ಆದರೆ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಿಂದ ಬಜತ್ತೂರು ವಳಾಲು ಟೋಲ್ ಪ್ಲಾಝಾಕ್ಕೆ ಇರುವ ಅಂತರ ಕೇವಲ 38 ಕಿ.ಮೀ. ಆದ್ದರಿಂದ ಈ ಟೋಲ್ ಪ್ಲಾಝಾದಿಂದಾಗಿ ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶಬೀರ್ ಅಹಮ್ಮದ್ ನೆಕ್ಕಿಲಾಡಿ ತಿಳಿಸಿದ್ದಾರೆ.

















