ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸೇತುವೆ ನಿರ್ಮಾಣಕ್ಕೆ 9.90 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿದ್ದು ಈ 11 ಸೇತುವೆಗಳು ಬಹಳ ವರ್ಷಗಳ ಬೇಡಿಕೆಯಾಗಿತ್ತು ಅದನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಈ ಹೊಸ ಸೇತುವೆ ಪ್ರಮುಖ ಕೊಂಡಿಯಾಗಲಿದೆ. ಪ್ರತೀ ಮಳೆಗಾಲದಲ್ಲಿ ಇಲ್ಲಿ ಸಂಚಾರಕ್ಕೆ ಕಷ್ಟಕರವಾಗಿತ್ತು. ಕೆಲವು ಕಡೆಗಳಲ್ಲಿ ಸಣ್ಣ ಮೋರಿಯಾಕಾರದ ಸೇತುವೆಗಳಿದ್ದರೂ ದೊಡ್ಡ ವಾಹನಗಳ ಓಡಾಟಕ್ಕೂ ತೊಂದರೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ನನ್ನಲ್ಲಿ ಮನವಿಯನ್ನು ಸಲ್ಲಿಸಿದ್ದು ಗ್ರಾಮಸ್ಥರ ಬೇಡಿಕೆಯನುಸಾರ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ಸರಕಾರ ಬಿಡಿಗಡೆ ಮಾಡಿದೆ ಎಂದು ಶಾಸಕರು ತಿಳಿಸಿದ್ದಾರೆ.
ಬೆಳಗಾವಿಯ ಅನುದಾನದಲ್ಲಿ ಉಳಿಕೆಯಾದ ಮೊತ್ತ ಪುತ್ತೂರಿಗೆ:
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ 240 ಕೋಟಿ ಅನುದಾನವನ್ನು ಸರಕಾರ ಅನುಮೋದನೆ ಮಾಡಿತ್ತು. ಇದರಲ್ಲಿ ಸ್ವಲ್ಪ ಅನುದಾನ ಉಳಿಕೆಯಾಗಿತ್ತು. ಈ ಅನುದಾನದಲ್ಲಿ ಉಳಿಕೆಯಾಗಿದೆ ಎಂಬ ವಿಚಾರ ಶಾಸಕರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯಪೃವೃತ್ತರಾದ ಶಾಸಕರು ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಅನುಮೋದನೆಗೊಂಡ ಅನುದಾನದಲ್ಲಿ ಉಳಿಕೆಯಾದ ಮೊತ್ತವನ್ನು ತನ್ನ ವಿಧಾನಸಭಾ ಕ್ಷೇತ್ರಕ್ಕೆ ನೀಡುವಂತೆ ಕೇಳಿಕೊಂಡಿದ್ದಾರೆ. ಶಾಸಕ ಅಶೋಕ್ ರೈ ಅಭಿವೃದ್ದಿ ಇಚ್ಚಾಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಉಳಿಕೆಯಾದ ಮೊತ್ತವನ್ನು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದಾರೆ. ಅನುದಾನ ಪಡೆದುಕೊಳ್ಳುವಲ್ಲಿಯೂ ಶಾಸಕರು ಯಶಸ್ವಿಯಾಗಿದ್ದಾರೆ.
ನಿರ್ಮಣವಾಗಲಿರುವ ಸೇತುವೆಗಳ ವಿವರ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬಳಿ ಅಗಲ ಕಿರಿದಾದ ಹ್ಯೂಮ್ ಸೇತುವೆಯನ್ನು ಸರ್ವ ಋತು ಸೇತುವೆಯನ್ನಾಗಿ ಮರು ನಿರ್ಮಾಣ ಮಾಡಲು 2 ಕೋಟಿ, ಬಂಟ್ವಾಳ ತಾಲೂಕು ಕೆದಿಲಾ ಗ್ರಾಮದ ಬೀಟಿಗ ಪೇರಮೊಗ್ರು ಸಂಪರ್ಕ ರಸ್ತೆಯ ಪೊರ್ಲಡ್ಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 1 ಕೋಟಿ, ಬಡಗನ್ನೂರು ಗ್ರಾಮ ಪಂ ವ್ಯಾಪಿಯ ಪಂಚಾತಿರಿ ಸುಳ್ಯಪದವು ಕಾರ್ಯಪದವು ರಸ್ತೆಯ ದೇವಸ್ಯ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 1 ಕೋಟಿ, ಆರ್ಯಾಪು ಗ್ರಾಮದ ಮೇಲ್ಮಜಲು ಕಂಬಳತಡ್ಡ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 50 ಲಕ್ಷ, ಆರ್ಯಾಪು ಗ್ರಾಮದ ಕುಂಜೂರುಪಂಜ ಮೇಗಿನ ಪಂಜ ಸಂಪರ್ಕ ಸೇತುವೆ ನಿರ್ಮಾಣಕ್ಕೆ 60 ಲಕ್ಷ, ಬಂಟ್ವಾಳ ತಾಲೈಕು ಇಡ್ಕಿದು ಗ್ರಾಮದ ಕೋಲ್ಪೆ ವಡ್ಯರ್ಪೆಯಿಂದ ಶಿರಾಡಿ ಧೂಮಾವತಿ ದೇವಸ್ಥಾನದ ಬಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 60 ಲಕ್ಷ, ಕೇಪು ಗ್ರಾಮದ ಕುದ್ದುಪದವು ಅಮೈ ಕೋಡಂದೂರು ಪದವು ರಸ್ತೆಗೆ ಅಮೈ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 90 ಲಕ್ಷ, ಕಾವು ಮಾಡ್ನೂರು ಗ್ರಾಮದ ಅಮ್ಚಿನಡ್ಕ ಮುಕಾರಿಮೂಲೆ ಎಂಬಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 70 ಲಕ್ಷ, ಆರ್ಯಾಪು ಗ್ರಾಮದ ನೀರ್ಕಜೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 40 ಲಕ್ಷ, ಅರಿಯಡ್ಕ ಗ್ರಾಮದ ಪಯಂದೂರು ಮೂಲಕ ತಿಂಗಳಾಡಿ ಸಂಪರ್ಕ ರಸ್ತೆ ಸೇತುವೆ ನಿರ್ಮಾಣಕ್ಕೆ 1.30 ಕೋಟಿ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಒತ್ತೆಸಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 50 ಲಕ್ಷ ಅನುದಾನ ಲೋಕೋಪಯೋಗಿ ಇಲಾಖೆಯಿಂದ ಮಂಜೂರುಗೊಂಡಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.





















