tamanvi
ಶಿಕ್ಷಣಸ್ಥಳೀಯ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ; ಕ್ರಾಂತಿಕಾರಿಗಳ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ: ಶ್ರೀಕಾಂತ ಶೆಟ್ಟಿ ಕಾರ್ಕಳ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಅಗತ್ಯವಿದೆ. ಅಹಿಂಸೆಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂಬ ಏಕಮುಖ ಇತಿಹಾಸವನ್ನು ಬಿಂಬಿಸುವ ಪ್ರಯತ್ನಗಳು ನಡೆದಿವೆ ಎಂದು ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ತಮ್ಮ ಭವಿಷ್ಯವನ್ನೇ ಲೆಕ್ಕಿಸದೆ ಹೋರಾಡಿದ ಕ್ರಾಂತಿಕಾರಿಗಳ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ಬಲಿದಾನ ಮಾಡಿದವರ ಹಾಗೂ ತ್ಯಾಗ ಮಾಡಿದವರ ಸ್ಮರಣೆಯೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಬೇಕು ಎಂದು ಅವರು ಹೇಳಿದರು.

ಭಾರತವು ಕೇವಲ ಭೌಗೋಳಿಕ ಗಡಿಯಲ್ಲ, ಭಾವನೆಗಳನ್ನು ಒಳಗೊಂಡಿರುವ ರಾಷ್ಟ್ರವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕೊಡುಗೆಯನ್ನು ಸ್ಮರಿಸುವ ಮೂಲಕ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನವನ್ನು ಬೆಳೆಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅಂತಹ ಇತಿಹಾಸವನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಝೀ ಕನ್ನಡ ವಾಹಿನಿಯ ಲಿಟ್ಲ್ ಚಾಂಪಿಯನ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಮನ್ನಣೆ ಗಳಿಸಿದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿ ಸನ್ಮಯ್ ಹಾಗೂ ಅವರ ಹೆತ್ತವರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್, ಸುರೇಶ್ ಶೆಟ್ಟಿ ಕೆ., ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸ್ವಾತಿ ಜೆ. ರೈ, ಸಂಸ್ಥೆಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ, ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸನ್ಮಯ್ ಪ್ರಾರ್ಥಿಸಿದರು. ಶ್ರೇಯಾ ಎಂ.ಎಸ್. ಸ್ವಾಗತಿಸಿದರು. ಲಾವಣ್ಯ ಎಸ್.ಬಿ. ಅತಿಥಿ ಪರಿಚಯ ನಡೆಸಿದರು. ತನುಷ್ ವಂದಿಸಿದರು. ಚೈತ್ರಾ, ಜಯಂತಿ ಹೊನ್ನಮ್ಮ, ವಿದ್ಯಾ ಸರಸ್ವತಿ ಹಾಗೂ ಅನುಪಮ ಅವರು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಅಙ್ಯಾ ವಿ.ಕೆ. ಮತ್ತು ಸಿಂಚನಾ ಎ. ನಿರೂಪಿಸಿದರು. ಶ್ರೀಧರ್ಯ ಸನ್ಮಾನಿತರನ್ನು ಪರಿಚಯಿಸಿದರು.

ಧ್ವಜಾರೋಹಣ ಹಾಗೂ ಮೆರವಣಿಗೆ

ಸಭಾ ಕಾರ್ಯಕ್ರಮಕ್ಕೂ ಮುನ್ನ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಕ್ಯಾಂಪಸ್‌ಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಎರಡೂ ಕ್ಯಾಂಪಸ್‌ಗಳಿಂದ ಕಿಲ್ಲೆ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಯ ಮಂಗಲ್ ಪಾಂಡೆ ಚೌಕದಲ್ಲಿ ನಡೆದ ಸರ್ಕಾರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ವಿದ್ಯಾರ್ಥಿನಿ ಜಯಪ್ರಭಾ ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ನಿರಂತರ ಯಶಸ್ಸು ದಾಖಲಿಸುತ್ತಿರುವ…

1 of 155