tamanvi
ಸ್ಥಳೀಯ

ಬಿ.ಸಿ.ರೋಡ್‌ನಲ್ಲಿ ವಿಹಿಂಪ–ಬಜರಂಗದಳ ಪ್ರತಿಭಟನೆ: ಗೂಂಡಾ ಕಾಯ್ದೆ ವಾಪಸ್‌ಗೆ ಆಗ್ರಹ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಬಿ.ಸಿ.ರೋಡ್: ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ ನ್ಯಾಯಾಲಯ ಜಾಮೀನು ನೀಡಿದ ಬಳಿಕವೂ ಗೂಂಡಾ ಕಾಯ್ದೆ ದಾಖಲಿಸಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್‌ (ವಿಹಿಂಪ) ಹಾಗೂ ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಬಿ.ಸಿ.ರೋಡ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಬಿ.ಸಿ.ರೋಡ್‌ನ ರಕೇಶ್ವರಿ ಸನ್ನಿಧಿ ಬಳಿ ನಡೆದ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಕಾರ್ಯಕರ್ತರನ್ನು ದಮನಿಸುವ ಕಾರ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದು ಜಾಗರಣ ವೇದಿಕೆಯ ಪ್ರಾಂತ ಸಹಸಂಯೋಜಕ ಸತೀಶ್ ದಾವಣಗೆರೆ ದಿಕ್ಕೂಚಿ ಭಾಷಣ ಮಾಡಿದರು. ತುಷ್ಟೀಕರಣದ ಧೋರಣೆ ನಿಲ್ಲಿಸಬೇಕು. ಅಧಿಕಾರಿಗಳು ಒಂದು ಪಕ್ಷದ ಪರವಾಗಿ ವರ್ತಿಸಬಾರದು ಹಾಗೂ ಹಿಂದು ಸಮಾಜಕ್ಕೆ ಅನ್ಯಾಯವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಅವರು ಆಗ್ರಹಿಸಿದರು.

ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮಾತನಾಡಿ, ಬಜರಂಗದಳವು ಸೇವೆ, ಸುರಕ್ಷೆ ಮತ್ತು ಸಂಸ್ಕಾರದ ತತ್ವಗಳೊಂದಿಗೆ ಬೆಳೆದ ಸಂಘಟನೆ. ಸಂಘಟನೆಯ ಕಾರ್ಯಕರ್ತರನ್ನು ಕೆಣಕುವ ಪ್ರಯತ್ನ ಮಾಡಬಾರದು. ಗೂಂಡಾ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ವಿಹಿಂಪ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ರಾವ್ ಪ್ರೇರಣಾ ಗೀತೆ ಹಾಡಿದರು. ಲೋಹಿತ್ ಪಣೋಲಿಬೈಲ್ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿ ಶಾಸಕರು ಉಪಸ್ಥಿತರಿದ್ದರು. ವಿಹಿಂಪ–ಬಜರಂಗದಳ ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ್ ಕುಟ್ಟಾರ್, ಕಾರ್ಯದರ್ಶಿ ಸಚಿನ್ ಮೆಲ್ಕಾರ್ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಭಾಗದಲ್ಲಿ ಆರ್‌ಎಸ್‌ಎಸ್ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಡಾ. ಕಮಲ ಪ್ರಭಾಕರ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಹಾಗೂ ಸಂಜೀವ ಮಠಂದೂರು ಸೇರಿದಂತೆ ಹಿಂದು ಸಂಘಟನೆ ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಗೂಂಡಾ ಕಾಯ್ದೆ ಜಾರಿ ಖಂಡಿಸಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ: ಸೆ.28ರ ಬಿ.ಸಿ. ರೋಡ್ ಚಲೋಗೆ ಬೆಂಬಲ

ಮಂಗಳೂರು: ಬಂಟ್ವಾಳದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯವು ಭರತ್…

1 of 137