ಉಜಿರೆ: ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕನಿಷ್ಠ ಒಂದು ಗಂಟೆಯಾದರೂ ಪರಿಶುದ್ಧ ತನು, ಮನ ಮತ್ತು ನಾಲಗೆಯಿಂದ ಶ್ರದ್ಧಾ-ಭಕ್ತಿಯಿಂದ ದೇವರ ಭಜನೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೋಮವಾರ ನಡೆದ 28ನೇ ವರ್ಷದ ಭಜನಾ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲಿಯುಗದಲ್ಲಿ ಅನ್ನ-ನೀರು ತ್ಯಜಿಸಿ ತಪಸ್ಸು ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ದೇವರು ನೀಡಿರುವ ತನು, ಮನ, ನಾಲಗೆ ಹಾಗೂ ವಿವೇಕವನ್ನು ಸದುಪಯೋಗಪಡಿಸಿಕೊಂಡು ಭಜನೆ ಮಾಡುವ ಮೂಲಕ ಸುಖ, ಶಾಂತಿ ಮತ್ತು ನೆಮ್ಮದಿಯೊಂದಿಗೆ ಸಾರ್ಥಕ ಜೀವನ ನಡೆಸಬಹುದು ಎಂದು ಸ್ವಾಮೀಜಿ ಹೇಳಿದರು.
ಧರ್ಮಸ್ಥಳದ ಚತುರ್ಧಾನ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಮನೆ-ಮನಗಳಲ್ಲಿ ಭಜನಾ ಸಂಸ್ಕೃತಿಯ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಿ, ಉತ್ತಮ ಸಂಸ್ಕಾರದೊಂದಿಗೆ ಧರ್ಮಜಾಗೃತಿ ಕಾರ್ಯ ಮಾಡುತ್ತಿರುವ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ದಂಪತಿಯ ಸೇವೆಯನ್ನು ಸ್ವಾಮೀಜಿ ಶ್ಲಾಘಿಸಿದರು.
ಭಜಕರು ಊರಿನ ಪ್ರಗತಿಯ ರೂವಾರಿಗಳಾಗಬೇಕು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭಜನಾ ಕಮ್ಮಟದಲ್ಲಿ ತರಬೇತಿ ಪಡೆದ ಭಜನಾಪಟುಗಳು ತಮ್ಮ ತಮ್ಮ ಊರಿನ ಪ್ರಗತಿಯ ರೂವಾರಿಗಳಾಗಬೇಕು. ಆದರ್ಶ ನಾಯಕರಾಗಿ ಸಮಾಜದ ಹಾಗೂ ಊರಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೂ ಭಜನಾ ಸಂಸ್ಕಾರವನ್ನು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಶುಭ ಹಾರೈಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್ ಹಾಗೂ ಐಶ್ವರ್ಯ ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.
ವಿದೂಷಿ ಚೈತ್ರಾ ಭಟ್ ಧರ್ಮಸ್ಥಳ ಮತ್ತು ಬಳಗದವರ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ದ.ಕ. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ವಂದಿಸಿದರು. ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಶಶಿಕಾಂತ ಜೈನ್ ಅವರ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.
123 ಭಜನಾ ಮಂಡಳಿಗಳ 204 ಶಿಬಿರಾರ್ಥಿಗಳು ಈ ವರ್ಷದ ಭಜನಾ ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.























