ಪುತ್ತೂರು: ಕೊಂಬೆಟ್ಟುವಿನ ಮನೆಯೊಂದರಿಂದ ಸುಮಾರು ₹1.50 ಲಕ್ಷ ಮೌಲ್ಯದ ಬೆಳ್ಳಿ ಸಾಮಾಗ್ರಿ ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಂಬೆಟ್ಟು ನಿವಾಸಿ ಸವಿತಾ ಎಂಬವರು ಆ.29ರಂದು ಮನೆಗೆ ಬೀಗ ಹಾಕಿ ಉಜಿರೆಗೆ ತೆರಳಿದ್ದರು. ಸೆ.25ರಂದು ಅವರ ಸಂಬಂಧಿಕರು ಮನೆಗೆ ಬಂದಾಗ ಬಾಗಿಲು ತೆರೆದಿರುವುದು ಕಂಡು ಸವಿತಾ ಅವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸವಿತಾ ಅವರು ಮಧ್ಯಾಹ್ನ ಮನೆಗೆ ಬಂದು ಪರಿಶೀಲಿಸಿದಾಗ, ಮನೆಯಲ್ಲಿದ್ದ ಬೆಳ್ಳಿಯ ದೀಪ, ಚೆಂಬು ಸೇರಿದಂತೆ ವಿವಿಧ ಬೆಳ್ಳಿ ಸಾಮಾಗ್ರಿಗಳು ಕಳವಾಗಿರುವುದು ಗಮನಕ್ಕೆ ಬಂದಿದೆ. ಕಳವಾದ ಬೆಳ್ಳಿ ಸಾಮಾಗ್ರಿಗಳ ಒಟ್ಟು ಮೌಲ್ಯ ಸುಮಾರು ₹1.50 ಲಕ್ಷ ಎಂದು ತಿಳಿದುಬಂದಿದೆ.
ಈ ಕುರಿತು ಸವಿತಾ ಅವರು ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























