ಅಪರಾಧ

ರಕ್ತ ಅಕ್ರಮ ಸಾಗಾಟ: ಅಂತಾರಾಜ್ಯ ಗ್ಯಾಂಗ್ ಬಂಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಅಕ್ರಮವಾಗಿ ರಕ್ತ ಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮಂಗಳವಾರ ರಾಮಗಢ ತಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಭಗತ್ ಚೌರಾಹಾ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 100 ಯೂನಿಟ್ ಪ್ಯಾಕ್ ಮಾಡಿದ ಕೆಂಪು ರಕ್ತ ಕಣಗಳನ್ನು (PRBC) ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮೊರಾದಾಬಾದ್ ನಿವಾಸಿಗಳಾದ ಅಹ್ಮದ್ ಮತ್ತು ತಾಜ್ ಗುಡ್ಡು ಎಂದು ಗುರುತಿಸಲಾಗಿದೆ. ಆರೋಪಿಗಳು ಮೊರಾದಾಬಾದ್‌ನ ಎಸ್‌ಎಸ್ ಚಾರಿಟೇಬಲ್ ಬ್ಲಡ್ ಬ್ಯಾಂಕ್‌ನಿಂದ ಕಡಿಮೆ ಬೆಲೆಗೆ ರಕ್ತ ಖರೀದಿಸಿ, ಬೇಡಿಕೆಗೆ ಅನುಗುಣವಾಗಿ ವಿವಿಧ ರಕ್ತನಿಧಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮೊರಾದಾಬಾದ್‌ನಿಂದ ಗೋರಖ್‌ಪುರಕ್ಕೆ ಅಕ್ರಮವಾಗಿ ರಕ್ತ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ರಾಮಗಢ ತಾಲ್ ಪೊಲೀಸರು, ಡ್ರಗ್ ಇನ್ಸ್‌ಪೆಕ್ಟರ್ ಶ್ರೀಧ್ವಜೇಶ್ವರ ಶುಕ್ಲಾ ಅವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.

ಭಗತ್ ಚೌರಾಹಾ ಸಮೀಪದ ಎಲ್‌ಐಸಿ ಕಚೇರಿ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ತಂಡವು ಉತ್ತರಾಖಂಡ ನೋಂದಣಿ ಸಂಖ್ಯೆಯ ಬಿಳಿ ಆಲ್ಟೊ ಕಾರನ್ನು ತಡೆದು ಪರಿಶೀಲಿಸಿತು. ಈ ವೇಳೆ ಕಾರಿನ ಹಿಂದಿನ ಸೀಟಿನಲ್ಲಿದ್ದ ರಟ್ಟಿನ ಪೆಟ್ಟಿಗೆಯಲ್ಲಿ 40 ರಕ್ತದ ಚೀಲಗಳು ಹಾಗೂ ಡಿಕ್ಕಿಯಲ್ಲಿದ್ದ ಥರ್ಮೋಕೋಲ್ ಬಾಕ್ಸ್‌ನಲ್ಲಿ 60 ರಕ್ತದ ಚೀಲಗಳು ಪತ್ತೆಯಾಗಿವೆ.

ವಶಪಡಿಸಿಕೊಂಡ ರಕ್ತವನ್ನು ಮೊರಾದಾಬಾದ್‌ನ ಎಸ್‌ಎಸ್ ಚಾರಿಟೇಬಲ್ ಬ್ಲಡ್ ಬ್ಯಾಂಕ್‌ನಿಂದ ಗೋರಖ್‌ಪುರದ ಆರೋಗ್ಯ ಬ್ಲಡ್ ಬ್ಯಾಂಕ್‌ಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ರಾಜಸ್ಥಾನ, ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಹಾಗೂ ಪಶ್ಚಿಮ ಉತ್ತರ ಪ್ರದೇಶದಿಂದ ರಕ್ತವನ್ನು ಅಕ್ರಮವಾಗಿ ಸಾಗಿಸಿ, ವಾಹನಗಳಲ್ಲಿ ಅಡಗಿಸಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಈ ಹಿಂದಿನಿಂದಲೂ ಲಭ್ಯವಾಗಿತ್ತು.

ಗೋರಖ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕೌಸ್ತುಭ್ ಅವರ ನಿರ್ದೇಶನದಂತೆ ರಾಮಗಢ ತಾಲ್ ಪೊಲೀಸ್ ಹೊರಠಾಣೆಯ ಉಸ್ತುವಾರಿ ಅಮಿತ್ ಚೌಬೆ ಈ ಪ್ರಕರಣದ ತನಿಖೆ ಆರಂಭಿಸಿದ್ದರು.

ಇನ್ನೊಂದೆಡೆ, ವಶಪಡಿಸಿಕೊಂಡ ರಕ್ತದ ಗುಣಮಟ್ಟ ಮತ್ತು ಇತರ ಅಂಶಗಳ ಪರಿಶೀಲನೆಗಾಗಿ ಔಷಧ ಇಲಾಖೆಯ ಅಧಿಕಾರಿಗಳು ಪ್ರತಿ ಬ್ಯಾಚ್‌ನಿಂದ ತಲಾ ಒಂದು ಯೂನಿಟ್ ಮಾದರಿಯನ್ನು ಸಂಗ್ರಹಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 318(2) ಹಾಗೂ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಸೆಕ್ಷನ್ 18/27ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಕ್ರಮ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ರಾಮಗಢ ತಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮಾನಂದ ರೈ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 122