ಪುತ್ತೂರು: ದರ್ಬೆಯ ಸಿಟಿಒ ಗುಡ್ಡದಲ್ಲಿರುವ ಅಲ್ಪಸಂಖ್ಯಾತರ ಸೇವಾ ಕೇಂದ್ರವನ್ನು ಅದರ ಮೂಲ ಉದ್ದೇಶಕ್ಕೆ ಬಳಸಬೇಕು. ಇಲ್ಲವಾದಲ್ಲಿ ಪುತ್ತೂರು ಶಾಸಕರ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಎಸ್‌ಡಿಪಿಐ ನಗರ ಸಮಿತಿ ಜೊತೆ ಕಾರ್ಯದರ್ಶಿ ಹರ್ಷದ್ ಹುಸೈನ್ ಎಚ್ಚರಿಸಿದ್ದಾರೆ.
ಸೋಮವಾರ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸೇವಾ ಕೇಂದ್ರ ಕೇವಲ ಸೈಬರ್ ಸೆಂಟರ್ ಅಲ್ಲ. ಇದು ತರಬೇತಿ ಕೇಂದ್ರ, ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವಾಗಿದ್ದು, ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವುದರ ಜೊತೆಗೆ ವಿವಿಧ ತರಬೇತಿಗಳ ಫಲಾನುಭವಿಗಳಿಗೆ ತಲಾ ₹13 ಸಾವಿರ ಭತ್ಯೆ ನೀಡಲಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಉದ್ಯೋಗ ಸಂಬಂಧಿತ ಅವಕಾಶಗಳಿಗೆ ನೆರವಾಗುವ ಕೇಂದ್ರವಾಗಿ ಇದನ್ನು ಬಳಸಬೇಕು ಎಂದು ಅವರು ಆಗ್ರಹಿಸಿದರು.
ಸೇವಾ ಕೇಂದ್ರವು ಎತ್ತರದ ಪ್ರದೇಶದಲ್ಲಿದೆ ಎಂಬ ಕಾರಣ ನೀಡಿ ಅದನ್ನು ಬಾಲಕರ ಹಾಸ್ಟೆಲ್ ಆಗಿ ಪರಿವರ್ತಿಸಲು ಮುಂದಾಗಿರುವುದು ಸರಿಯಲ್ಲ ಎಂದು ಹರ್ಷದ್ ಹುಸೈನ್ ಆಕ್ಷೇಪಿಸಿದರು. ಇದೇ ಪ್ರದೇಶದಲ್ಲಿ 2008ರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀ ಶಕ್ತಿ ಭವನ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಎಂದು ಹೇಳಿದರು.
ಮುಂದಿನ 20 ದಿನಗಳೊಳಗೆ ಕೇಂದ್ರವನ್ನು ಮೂಲ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದಿದ್ದರೆ ಪುತ್ತೂರು ಶಾಸಕರ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಎಸ್‌ಡಿಪಿಐ ನಗರ ಸಮಿತಿ ಅಧ್ಯಕ್ಷ ತಾಜುದ್ದೀನ್ ಸಾಲ್ಮರ ಮಾತನಾಡಿ, ಸೇವಾ ಕೇಂದ್ರವನ್ನು ಹಾಸ್ಟೆಲ್ ಆಗಿ ಪರಿವರ್ತಿಸದೆ ಯಥಾಸ್ಥಿತಿಯಲ್ಲಿ ಸಮುದಾಯದ ಬಳಕೆಗೆ ನೀಡುವಂತೆ ಸರ್ಕಾರ ಹಾಗೂ ಅಲ್ಪಸಂಖ್ಯಾತರ ಇಲಾಖೆಗೆ ಮನವಿ ಮಾಡಲಾಗಿದೆ. ಇಲಾಖೆಯ ಸುತ್ತೋಲೆಯನ್ನು ಉಲ್ಲಂಘಿಸಿ ಕೇಂದ್ರದ ಬಳಕೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರವನ್ನು ಮೂಲ ಉದ್ದೇಶಕ್ಕೆ ಬಳಸದೇ ಇದ್ದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಶಮೀರ್ ನಾಜೂಕ್, ಕಾರ್ಯದರ್ಶಿ ಇರ್ಫಾಝ್ ಬನ್ನೂರು ಹಾಗೂ ಸದಸ್ಯ ಇಶಾನ್ ಗೋಳಿಕಟ್ಟೆ ಉಪಸ್ಥಿತರಿದ್ದರು.























