tamanvi
ನಿಧನ

ಕಂಬಳ ಕ್ಷೇತ್ರದ ಲೆಜೆಂಡ್ ‘ನಂದಳಿಕೆ ಪಾಂಡು’ ಇನ್ನಿಲ್ಲ..!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಣಿಪಾಲ, ಸೆ.28: ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹಾಗೂ ಹಲವು ಸಾಧನೆಗಳ ಮೂಲಕ ‘ಲೆಜೆಂಡ್’ ಎಂದೇ ಗುರುತಿಸಿಕೊಂಡಿದ್ದ ನಂದಳಿಕೆ ಪಾಂಡು ಎಂಬ ಕೋಣ ಸೋಮವಾರ (ಸೆ.28) ಮುಂಜಾನೆ ಅಸುನೀಗಿದೆ.

ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪಾಂಡು, ಕಂಬಳ ಕೂಟಗಳಲ್ಲಿ ತನ್ನ ವೇಗದ ಓಟ ಹಾಗೂ ವಿಭಿನ್ನ ಸ್ವಭಾವದಿಂದ ಗಮನ ಸೆಳೆದಿತ್ತು. ವಿಶೇಷವಾಗಿ ಹಗ್ಗ ವಿಭಾಗದಲ್ಲಿ ಹಲವು ಗಮನಾರ್ಹ ಸಾಧನೆಗಳನ್ನು ಮಾಡಿದ್ದ ಪಾಂಡು ಕಂಬಳಾಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದಿತ್ತು.

ಕಂಬಳ ದಿಗ್ಗಜ ಕೋಣಗಳಾದ ಚೆನ್ನ ಹಾಗೂ ಮೋಡೆಗಳೊಂದಿಗೆ ಪಾಂಡು ಜೊತೆಯಾಗಿ ಓಡಿ ಹಲವು ಬಾರಿ ಗಮನ ಸೆಳೆದಿತ್ತು. ಖ್ಯಾತ ಮಾಜಿ ಓಟಗಾರ ನಕ್ರೆ ಜಯಕರ ಮಡಿವಾಳ ಅವರು ಪಾಂಡುವಿನೊಂದಿಗೆ ಸ್ಪರ್ಧಿಸಿ ಹಲವು ಪದಕಗಳನ್ನು ಗೆದ್ದಿದ್ದರು. ಓಟದ ಕರೆಯಲ್ಲಿ ಜಯಕರ ಮಡಿವಾಳರ ಸ್ವರಕ್ಕೆ ಪಾಂಡು ಉತ್ತಮವಾಗಿ ಸ್ಪಂದಿಸಿ ವೇಗವಾಗಿ ಓಡುತ್ತಿದ್ದ ದೃಶ್ಯಗಳು ಕಂಬಳಾಭಿಮಾನಿಗಳ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ.

ಪಾಂಡುವಿನ ಓಟವನ್ನು ಕಣ್ತುಂಬಿಕೊಂಡವರು ಅದರ ವೇಗವನ್ನು ಮೆಚ್ಚಿಕೊಳ್ಳುತ್ತಿದ್ದರು. ಫೋರ್ಸ್‌ನಲ್ಲಿ ಮಂಜೊಟ್ಟಿಗೆ ಹಾರುವ ರೀತಿಯಲ್ಲಿ ಪಾಂಡು ಓಡುತ್ತಿದ್ದ ದೃಶ್ಯ ನೋಡುಗರಿಗೆ ರೋಮಾಂಚನ ಮೂಡಿಸುತ್ತಿತ್ತು.

ಸುಮಾರು ಮೂರು ವರ್ಷಗಳ ಹಿಂದೆ ಹೊಕ್ಕಾಡಿಗೋಳಿ ಕಂಬಳದಲ್ಲಿ ಪಾಂಡು ಕೊನೆಯ ಬಾರಿಗೆ ಪದಕ ಗೆದ್ದುಕೊಂಡಿತ್ತು. ಬಳಿಕ ಶ್ರೀಕಾಂತ್ ಭಟ್ ಅವರ ಹಟ್ಟಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಪಾಂಡು, ಇದೀಗ ಕೊನೆಯುಸಿರೆಳೆದಿದೆ.

ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಪಾಂಡುವಿನ ನಿಧನಕ್ಕೆ ಕಂಬಳಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts