ನಿಧನ

ಚೆನ್ನೈಯಲ್ಲಿ ಕನ್ನಡದ ಕಂಪು ಪಸರಿಸಿದ ಪುತ್ತೂರಿನ ಹಿರಿಯ ಸಾಹಿತಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಚೆನ್ನೈಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡಿದ್ದ ಪುತ್ತೂರಿನ ಹಿರಿಯ ಸಾಹಿತಿ, ವಿದ್ವಾಂಸ, ಅಧ್ಯಾಪಕ ಹಾಗೂ ಕನ್ನಡ ಸಂಘಟಕ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ (81) ಅವರು ಅಲ್ಪಕಾಲದ ಅಸೌಖ್ಯದಿಂದ ಅ.3ರಂದು ಮುಂಜಾನೆ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾದರು.

gl

ಕನ್ನಡ ಸಾಹಿತ್ಯ, ಅಧ್ಯಾಪನ, ಸಂಶೋಧನೆ, ಅನುವಾದ ಹಾಗೂ ಕನ್ನಡ ಸಂಘಟನಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಡಾ. ಶ್ರೀಕೃಷ್ಣ ಭಟ್ ಅವರು ಸುಮಾರು ಮೂರು ದಶಕಗಳ ಕಾಲ ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದರು. ಚೆನ್ನೈಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಚಟುವಟಿಕೆಗಳನ್ನು ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಸಾಹಿತಿ, ಪತ್ರಕರ್ತ ಹಾಗೂ ಯಕ್ಷಗಾನ ಅಭಿಮಾನಿಯಾಗಿದ್ದ ಅವರು ಕನ್ನಡ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಸದಾ ಹಸನ್ಮುಖಿ, ಸ್ನೇಹಮಯಿ ಹಾಗೂ ಮೃದುಭಾಷಿಯಾಗಿದ್ದ ಅವರು ಅಪಾರ ಶಿಷ್ಯರು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

ಅವರು ಪತ್ನಿ ಸರಸ್ವತಿ, ಪುತ್ರ ಸಂಗೀತಗಾರ ಶ್ಯಾಮಪ್ರಕಾಶ್, ಸೊಸೆ ಸ್ವಾತಿ, ಪುತ್ತೂರಿನ ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಮತ್ತು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಸುಬ್ರಹ್ಮಣ್ಯ ಅರ್ತಿಕಜೆ ಸೇರಿದಂತೆ ಕುಟುಂಬಸ್ಥರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅರ್ತಿಕಜೆಯಿಂದ ಮದ್ರಾಸ್ ವಿಶ್ವವಿದ್ಯಾನಿಲಯದವರೆಗೆ

1945ರ ಏ.19ರಂದು ಪುತ್ತೂರು ತಾಲೂಕಿನ ಅರ್ತಿಕಜೆ ಗ್ರಾಮದಲ್ಲಿ ಶಾಮ್ ಭಟ್ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಕೃಷ್ಣ ಭಟ್ ಅವರು ಕೃಷಿ ಕುಟುಂಬದ ಸರಳ ಬದುಕಿನಿಂದ ವಿದ್ಯಾಭ್ಯಾಸದ ಉನ್ನತ ಹಂತಕ್ಕೇರಿದವರು. ಆರ್ಥಿಕ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸದ ಮೇಲಿನ ಆಸಕ್ತಿಯಿಂದ ನದಿಯನ್ನು ದಾಟಿ ಶಾಲೆಗೆ ತೆರಳಿ ಶಿಕ್ಷಣ ಪಡೆದಿದ್ದರು.

ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಪಡೆದ ಅವರು ಬಳಿಕ ಅಲ್ಲಿಯೇ ಸುಮಾರು ಮೂರು ವರ್ಷ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿದರು. 1969ರಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪಡೆದ ಅವರು, 1971ರಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದರು.

1975ರವರೆಗೆ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಳಿಕ ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರ್ಪಡೆಗೊಂಡರು. ಬಳಿಕ ಪ್ರಾಧ್ಯಾಪಕರಾಗಿ ಹಾಗೂ 1991ರಿಂದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

1999ರಿಂದ 2000ರವರೆಗೆ ಮದ್ರಾಸ್ ವಿಶ್ವವಿದ್ಯಾನಿಲಯದ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. 2005ರಲ್ಲಿ ನಿವೃತ್ತರಾದ ಬಳಿಕವೂ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

‘ಮದ್ರಾಸಿನಲ್ಲಿ ಕನ್ನಡ ಕಟ್ಟಿದ ಹಿರಿಯ ವಿದ್ವಾಂಸ’: ವಿವೇಕ ರೈ ಸಂತಾಪ

ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರ ನಿಧನಕ್ಕೆ ಹಿರಿಯ ಸಾಹಿತಿ ಬಿ.ಎ. ವಿವೇಕ ರೈ ಸಂತಾಪ ಸೂಚಿಸಿದ್ದಾರೆ.

ನಿಡುಗಾಲದ ಸ್ನೇಹಿತ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿದ್ದ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರ ನಿಧನದ ಸುದ್ದಿ ಬಹಳ ದುಃಖದಾಯಕವಾಗಿದೆ. ಮದ್ರಾಸು (ಚೆನ್ನೈ) ನಗರದಲ್ಲಿ ಕನ್ನಡವನ್ನು ಕಟ್ಟುವ ಮತ್ತು ಬೆಳೆಸುವ ಕಾರ್ಯದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಹಿರಿಯ ವಿದ್ವಾಂಸರೂ, ಸಜ್ಜನರೂ ಆಗಿದ್ದರು ಎಂದು ವಿವೇಕ ರೈ ಸ್ಮರಿಸಿದ್ದಾರೆ.

ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರ ನಿಧನದಿಂದ ಕನ್ನಡ ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ವಿವೇಕ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts