ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರವರ ಶುಭಾಶೀರ್ವಾದಗಳೊಂದಿಗೆ ವರ್ಷಂಪ್ರತಿ ನಡೆಯುವ ನವರಾತ್ರಿ ಪೂಜೆ, ಶ್ರೀ ಶಾರದೋತ್ಸವ, ಚಂಡಿಕಾಹೋಮ ಹಾಗೂ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.11ರಿಂದ ಅ.21ರವರೆಗೆ ನಡೆಯಲಿವೆ.
ಅ.11ರಂದು ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ನಗರಸಭಾ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.
ಅ.17ರಂದು ಬೆಳಗ್ಗೆ 9.30ರ ಬಳಿಕ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದೆ. ಮಹಾವೀರ ಮೆಡಿಕಲ್ ಸೆಂಟರ್‌ನ ವೈದ್ಯೆ ಡಾ. ಆಶಾ ಪುತ್ತೂರಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ತಮನ್ನಿ ಸಿಲ್ಕ್ ಮಾಲಕಿ ಮಾಲಾಶ್ರೀ, ರವೀಂದ್ರ ಶೆಟ್ಟಿ ನುಳಿಯಾಲು, ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಮ ಅಳ್ವ, ಭಾವಿನ್ ಶೇಟ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ಮುಳಿಯ ಜ್ಯುವೆಲ್ಲರ್ಸ್ ನಿರ್ದೇಶಕಿ ಕೃಷ್ಣವೇಣಿ ಮುಳಿಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಳಿಕ ಸುಸ್ವರ ಮೆಲೋಡಿಸ್ ಉಪ್ಪಿನಂಗಡಿ ವತಿಯಿಂದ ರಂಗಯ್ಯ ಬಳ್ಳಾಲ್ ಕೆದಂಬಾಡಿ ಬೀಡು ಹಾಗೂ ತಂಡದಿಂದ ಭಕ್ತಿ ಭಾವ–ಗಾನ ಸಂಭ್ರಮ ನಡೆಯಲಿದೆ.
ಅ.18ರಂದು ಬೆಳಗ್ಗೆ 8 ಗಂಟೆಯಿಂದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಳಿಕ ವಿಶ್ವಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರ್ (ರಿ.), ಪುತ್ತೂರು ಇದರ ಶಿಷ್ಯವೃಂದದಿಂದ ವಿದೂಷಿ ನಯನಾ ವಿ. ರೈ ಮತ್ತು ವಿದೂಷಿ ಸ್ವಸ್ತಿಕಾ ಆರ್. ಶೆಟ್ಟಿ ಕುದ್ಯಾಡಿ ಅವರ ನಿರ್ದೇಶನದಲ್ಲಿ ‘ನೃತ್ಯಧಾರೆ’ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಅ.19ರಂದು ಎಸ್.ಎಲ್.ವಿ. ಬುಕ್‌ಹೌಸ್, ಮೈಸೂರು ಇದರ ಮಾಲಕ ದಿವಾಕರ್ ದಾಸ್ ನೇರ್ಲಾಜೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಡಾ. ಕಿರಣ್ ಕುಮಾರ್ ಗಾನಸಿರಿ ಅವರ ನೇತೃತ್ವದಲ್ಲಿ ಗಾನಸಿರಿ ಕಲಾಕೇಂದ್ರದ ಉದಯೋನ್ಮುಖ ಗಾಯಕರಿಂದ ‘ಗಾನಸಿರಿ ಸ್ವರ ಸಂಗಮ’ ಕಾರ್ಯಕ್ರಮ ನಡೆಯಲಿದೆ.
ಅ.20ರಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಪಾಂಚಜನ್ಯ ಯಕ್ಷಕಲಾ ವೃಂದ, ಪುತ್ತೂರು ವತಿಯಿಂದ ‘ಅಭೀಷ್ಠ ಸಿದ್ಧಿ’ ಯಕ್ಷಗಾನ ಬಯಲಾಟ ನಡೆಯಲಿದೆ.
ಅ.21ರಂದು ಭವ್ಯ ಶೋಭಾಯಾತ್ರೆ
ಅ.21ರಂದು ಬೆಳಗ್ಗೆ 9 ಗಂಟೆಯಿಂದ ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ ಬೊಳುವಾರು ವೃತ್ತದಿಂದ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ.
ಚೆಂಡೆಮೇಳ, ವಾದ್ಯಘೋಷ, ಕುಣಿತ ಭಜನೆ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳು, ಕೇರಳ ಹಾಗೂ ತಮಿಳುನಾಡಿನ ಪ್ರಸಿದ್ಧ ಸಾಂಸ್ಕೃತಿಕ ಕಲಾತಂಡಗಳ ವಿಶೇಷ ಪ್ರದರ್ಶನಗಳು ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಲಿವೆ.
ನವರಾತ್ರಿ ಉತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅ.21ರಂದು ನಡೆಯಲಿರುವ ಶಾರದಾ ದೇವಿಯ ಭವ್ಯ ಶೋಭಾಯಾತ್ರೆಯೊಂದಿಗೆ ಪುತ್ತೂರು ದಸರಾ–2026ಕ್ಕೆ ವೈಭವದ ತೆರೆ ಬೀಳಲಿದೆ.























