ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ರಾಜ್ಯ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಈ ಕುರಿತು ಸಮಗ್ರ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪುತ್ತೂರು ಬಿಜೆಪಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಮಂಗಳವಾರ ಅಮರ್ ಜವಾನ್ ಜ್ಯೋತಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದೇವಸ್ಥಾನದ ಅವ್ಯವಹಾರ ಹಾಗೂ ರಾಜಕೀಯ ಹಸ್ತಕ್ಷೇಪದ ಕುರಿತು ಭಕ್ತರಿಂದ ಹಲವು ದೂರುಗಳು ಕೇಳಿಬಂದಿದ್ದರೂ, ದೇವರ ಹೆಸರನ್ನು ಬೀದಿಗೆ ತರಬಾರದು ಎಂಬ ಕಾರಣಕ್ಕೆ ಈವರೆಗೆ ಮೌನವಾಗಿದ್ದೆವು. ಆದರೆ ದೇವಳದ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಇಲ್ಲದಿರುವುದರಿಂದ ಭಕ್ತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.
ದೇವಳದ ಕಾಮಗಾರಿಗೆ ಸಂಬಂಧಿಸಿ ವ್ಯವಸ್ಥಾಪನಾ ಸಮಿತಿಯ ಸದಸ್ಯರೊಬ್ಬರ ಹೆಸರಿಗೆ ₹70 ಲಕ್ಷ ಪಾವತಿಸಲಾಗಿದೆ ಹಾಗೂ ಸಣ್ಣಪುಟ್ಟ ಖರ್ಚುಗಳ ಹೆಸರಿನಲ್ಲಿ ತಿಂಗಳಿಗೆ ಸುಮಾರು ₹14 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದರು. ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಭಕ್ತರ ದೇಣಿಗೆಯಿಂದ ನಿರ್ಮಿಸಲಾಗಿದ್ದ ಅಯ್ಯಪ್ಪ ಗುಡಿ, ನಾಗನ ಕಟ್ಟೆ ಹಾಗೂ ನಟರಾಜ ವೇದಿಕೆಯ ಕಟ್ಟಡಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿರುವ ಕುರಿತು ಕೂಡ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ದೇವಳದ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ಅಗತ್ಯವಿದೆ ಎಂದರು. ಧಾರ್ಮಿಕ ಕ್ಷೇತ್ರದ ಸ್ವರೂಪಕ್ಕೆ ಧಕ್ಕೆ ತರುವಂತಹ ಕಾಮಗಾರಿಗಳನ್ನು ನಡೆಸಬಾರದು ಎಂದು ಒತ್ತಾಯಿಸಿದರು.
ದೇವಳದ ಅನ್ನಛತ್ರವನ್ನು ಹಿಂದಿನ ಅಧ್ಯಕ್ಷರು ನಿರ್ಮಿಸಿದ್ದರು. ಪುಷ್ಕರಿಣಿ ದುರಸ್ತಿಗೆ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಪುಡಾ) ₹35 ಲಕ್ಷ ಹಾಗೂ ಜನರಿಂದ ₹54 ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ ಎಂದು ಅವರು ಹೇಳಿದರು. ಈ ಅವ್ಯವಸ್ಥೆಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಹಿಂದಿನ ತಹಸೀಲ್ದಾರ್ ಕೋಚಣ್ಣ ರೈ ಅವರ ಅವಧಿಯಲ್ಲಿ ದೇವಳಕ್ಕೆ 18 ಎಕರೆ ಜಾಗ ಖರೀದಿಸಿ ಒದಗಿಸಲಾಗಿತ್ತು. ಇದೀಗ ಇದೇ ಜಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ವ್ಯವಸ್ಥಾಪನಾ ಸಮಿತಿ ಮುಂದಾಗಿದೆ ಎಂದು ಆರೋಪಿಸಿದ ಅವರು, ದೇವಳದ ಸುತ್ತ ಈಗಾಗಲೇ ಏಳು ಸಂಪರ್ಕ ರಸ್ತೆಗಳಿದ್ದು ಮತ್ತೊಂದು ರಸ್ತೆ ನಿರ್ಮಿಸುವ ಅಗತ್ಯವೇನು ಎಂಬುದನ್ನು ಸಮಿತಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಲೋಕೇಶ್ ಚಾಕೊಟೆ ಮನವಿ ಪತ್ರ ವಾಚಿಸಿದರು. ಪ್ರತಿಭಟನೆಯ ಬಳಿಕ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ನ್ಯಾಯಾಂಗ ತನಿಖೆ ನಡೆಸಿ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.
























