ಮಂಗಳೂರು: 2015ರಲ್ಲಿ ಮಂಗಳೂರು ಕಾರಾಗೃಹದಲ್ಲಿ ನಡೆದ ಮಾಡೂರು ಯುಸೂಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಆರೋಪಿಗಳಿಗೆ ಒಟ್ಟು ₹76 ಸಾವಿರ ದಂಡ ವಿಧಿಸಲಾಗಿದೆ.
ಲಿತೇಶ್ ಪೂಜಾರಿ ಅಲಿಯಾಸ್ ಲಿತ್ತು, ಶೋಭರಾಜ್ ಅಲಿಯಾಸ್ ಶೋಭಿ, ಯುವರಾಜ್, ಪ್ರದೀಪ್ ಹಾಗೂ ಉಮೇಶ್ ಕೊಂಬಾರ್ ಅಲಿಯಾಸ್ ಉಮೇಶ್ ಕುಂಬಾರ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಅ.1ರಂದು ತೀರ್ಪು ಪ್ರಕಟಿಸಿದರು.
2015ರ ನವೆಂಬರ್ 2ರಂದು ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯುಸೂಫ್ ಹತ್ಯೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಎಸಿಪಿ ತಿಲಕ್ ಚಂದ್ರ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ. ಮೋಹನ್ ಕುಮಾರ್ ವಾದ ಮಂಡಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ ಐವರು ಆರೋಪಿಗಳು ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.






















