ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಎಸ್ಐಟಿ ಮರುತನಿಖೆ ನಡೆಸುತ್ತಿರುವ ಸಂಬಂಧ ನೂತನವಾಗಿ ನಿಯೋಜನೆಯಾಗಿರುವ ಎಫ್.ಎಸ್.ಎಲ್ ವಿಭಾಗದ ತಜ್ಞ ವೈದ್ಯರ ತಂಡ ಮೃತದೇಹ ಪತ್ತೆಯಾದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಸಂಬಂಧ ಎಸ್ಐಟಿ ಮುಖ್ಯಸ್ಥರಾದ ಚೇತನ್ ಸಿಂಗ್ ರಾಥೋಡ್ ಅವರು ಬೆಂಗಳೂರು, ಬೆಳಗಾವಿ, ಹಾವೇರಿಯ ನುರಿತ ಮೂವರು ಎಫ್ಎಸ್ಎಲ್ ವೈದ್ಯರ ನೇತೃತ್ವದಲ್ಲಿ ಮೆಡಿಕಲ್ ಬೋರ್ಡ್ ರಚನೆ ಮಾಡಿದ್ದಾರೆ. ಮೆಡಿಕಲ್ ಬೋರ್ಡ್ ನಲ್ಲಿರುವ ಎಫ್.ಎಸ್.ಎಲ್ ವಿಭಾಗದ ಮೂವರು ತಜ್ಞ ವೈದ್ಯರ ತಂಡ ಸೌಜನ್ಯ ಮೃತದೇಹ ಪತ್ತೆಯಾದ ಧರ್ಮಸ್ಥಳ ಗ್ರಾಮದ ಮಣ್ಣಸಂಕ ಸ್ಥಳಕ್ಕೆ ನ.17 ರಂದು ಸಂಜೆ 4 ಗಂಟೆಗೆ ಎಸ್ಐಟಿ ಅಧಿಕಾರಿಗಳ ಜೊತೆಯಲ್ಲಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ಮತ್ತು ಸಿಬ್ಬಂದಿ ಎಸ್ಐಟಿ ಅಧಿಕಾರಿಗಳ ಜೊತೆಯಲ್ಲಿದ್ದಾರೆ.
ಮೆಡಿಕಲ್ ಬೋರ್ಡ್ ತಜ್ಞ ವೈದ್ಯರ ತಂಡ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸೌಜನ್ಯ ಮೃತದೇಹ ಸಿಕ್ಕಿದ ದಿನದ ಫೋಟೋ & ವಿಡಿಯೋ ಕೂಡ ಪರಿಶೀಲನೆ ನಡೆಸಿ ಎಸ್ಐಟಿ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





















