ಬಂಟ್ವಾಳ: ಗಾಂಧಿ ಜಯಂತಿ ಪ್ರಯುಕ್ತ ಅಲ್ಲಿಪಾದೆ ಸಂತ ಅಂತೋನಿ ದೇವಾಲಯದ ನೇತೃತ್ವದಲ್ಲಿ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಅಕ್ಟೋಬರ್ 2ರಂದು ನಡೆಯಿತು.
ಅಲ್ಲಿಪಾದೆ ಸಂತ ಅಂತೋನಿ ದೇವಾಲಯ, ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಸಂತ ಜೋನ್ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ದೇವಶ್ಯಪಡೂರು, ಸರಪಾಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅಲ್ಲಿಪಾದೆ ಹಾಗೂ ನಾವೂರು ಪರಿಸರದಲ್ಲಿ ಸಂತ ಜೋಸೆಫ್ ವಾಳೆಯ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಅಲ್ಲಿಪಾದೆ ಸಂತ ಅಂತೋನಿ ದೇವಾಲಯದ ಧರ್ಮಗುರು ಫಾ. ರಾಬರ್ಟ್ ಡಿಸೋಜಾ ಮಾತನಾಡಿ, ನಮ್ಮ ದೇಶವನ್ನು ಹಾಗೂ ಆರೋಗ್ಯವನ್ನು ವೃದ್ಧಿಗೊಳಿಸುವ ಉತ್ತಮ ಹೆಜ್ಜೆಯನ್ನು ನಾವಿಂದು ಇಟ್ಟಿದ್ದೇವೆ. ಅಲ್ಲಿಪಾದೆ ಪರಿಸರವನ್ನು ಎಲ್ಲಾ ರೀತಿಯಲ್ಲೂ ಸ್ವಚ್ಛತೆ ಕಾಪಾಡಲು ಹಾಗೂ ಜಾಗೃತಿ ಮೂಡಿಸಿಕೊಳ್ಳಲು ಈ ಕಾರ್ಯಕ್ರಮ ಮುನ್ನುಡಿ. ಗಾಂಧಿ ಜಯಂತಿಯ ಈ ಶುಭದಿನದಂದು ಅಲ್ಲಿಪಾದೆ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಮುಂದಿಟ್ಟಿರುವ ಈ ಹೆಜ್ಜೆಗೆ ಎಲ್ಲರೂ ಜೊತೆಗೂಡಿ ಸ್ವಚ್ಛತೆ ಎಲ್ಲಾ ಕಡೆಯೂ ಮನೆಮಾಡಲಿ ಎಂದು ಶುಭಹಾರೈಸಿದರು.
ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ಫಾ. ಫ್ಲೇವಿಯನ್, ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ರೊನಾಲ್ಡ್ ಪಾಯಸ್, ಕಾರ್ಯದರ್ಶಿ ವಿನೋದ್ ಸಿಕ್ವೇರಾ, ಅಲ್ಲಿಪಾದೆ ಗ್ರಾಪಂ ಸದಸ್ಯ ವಿನ್ಸೆಂಟ್ ಪಿಂಟೋ, ಸಂತ ಸೆಬಾಸ್ಟಿಯನ್ ವಾಳೆಯ ಗುರಿಕಾರ ಮಡ್ತೀನಿ ಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು.






















