tamanvi
ಕರಾವಳಿ

ಮಡಗಾಂವ್–ಮಂಗಳೂರು ವಂದೇ ಭಾರತ್‌ ಸೇವೆ ಬೆಂಗಳೂರಿನವರೆಗೆ ವಿಸ್ತರಣೆ: ರೈಲ್ವೆ ಸಚಿವಾಲಯದಿಂದ ಅನುಮತಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಬೆಂಗಳೂರು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹಾಸನ, ಮಂಗಳೂರು ಜಂಕ್ಷನ್‌, ಉಡುಪಿ ಹಾಗೂ ಕಾರವಾರ ಮಾರ್ಗವಾಗಿ ಸಂಚರಿಸುವಂತೆ ಮಡಗಾಂವ್‌–ಮಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೇವೆಯನ್ನು ಬೆಂಗಳೂರಿನವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಅವಕಾಶ ನೀಡಿದೆ.

ಮಡಗಾಂವ್‌ನಿಂದ ಮಂಗಳೂರುವರೆಗೆ ಸಂಚರಿಸುತ್ತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೇವೆಯನ್ನು ಬೆಂಗಳೂರಿನವರೆಗೆ ವಿಸ್ತರಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದರು.

ಬೆಂಗಳೂರು–ಹಾಸನ–ಮಂಗಳೂರು ಜಂಕ್ಷನ್‌–ಉಡುಪಿ–ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ರೈಲು ಸಂಪರ್ಕ ಕಲ್ಪಿಸುವ ಈ ವಿಸ್ತರಣೆಯಿಂದ ಬೆಂಗಳೂರು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ಸಂಪರ್ಕ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.

ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗದ ಮಹತ್ವವನ್ನು ಕುಮಾರಸ್ವಾಮಿ ಅವರು ತಮ್ಮ ಮನವಿಯಲ್ಲಿ ವಿವರಿಸಿದ್ದರು. ಪ್ರವಾಸೋದ್ಯಮ, ಧಾರ್ಮಿಕ ಯಾತ್ರೆ, ಶಿಕ್ಷಣ ಹಾಗೂ ವೃತ್ತಿಪರ ಉದ್ದೇಶಗಳಿಗಾಗಿ ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿರುವುದರಿಂದ ವಂದೇ ಭಾರತ್‌ ಸೇವೆಯನ್ನು ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದರು.

ಅಲ್ಲದೆ, ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾದ ಪ್ರಮುಖ ವಾಣಿಜ್ಯ, ಬಂದರು ಹಾಗೂ ಪ್ರವಾಸೋದ್ಯಮ ಕೇಂದ್ರಗಳ ನಡುವೆ ವೇಗದ ರೈಲು ಸಂಪರ್ಕ ಕಲ್ಪಿಸುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ರೈಲ್ವೆ ಸಚಿವರ ಗಮನಕ್ಕೆ ತಂದಿದ್ದರು.

ರೈಲ್ವೆ ಸಚಿವಾಲಯದ ಈ ಅನುಮತಿಯಿಂದ ಬೆಂಗಳೂರು–ಕರಾವಳಿ–ಗೋವಾ ನಡುವೆ ವೇಗದ ರೈಲು ಪ್ರಯಾಣಕ್ಕೆ ಹೊಸ ಅವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌.. ರಿಫರ್ಬಿಶ್ಡ್ ಲ್ಯಾಪ್’ಟಾಪ್ ಖರೀದಿಗೆ ಸಿಗಲಿದೆ ಭರ್ಜರಿ ಆಫರ್ಸ್!!

ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಕೋರ್ ಟೆಕ್ನಾಲಜೀಸ್…