ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ ಮಾಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸುವ ಉದ್ದೇಶದ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ–2026ರ ನೂತನ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.
ಈ ಕುರಿತು ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅಧಿಸೂಚನೆ ಹೊರಡಿಸಿದ್ದಾರೆ.
ಹೊಸ ನಿಯಮದ ಪ್ರಕಾರ, ಜನನ ಅಥವಾ ಮರಣ ಸಂಭವಿಸಿದ ದಿನಾಂಕದಿಂದ ಒಂದು ವರ್ಷದ ಬಳಿಕ ಹಾಗೂ ಎರಡು ವರ್ಷ ಪೂರ್ಣಗೊಳ್ಳುವ ಮೊದಲು ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆಯುವುದು ಕಡ್ಡಾಯವಾಗಲಿದೆ.
ನಿಗದಿತ ಶುಲ್ಕ ಪಾವತಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಆದೇಶದ ಆಧಾರದ ಮೇಲೆ ನೋಂದಣಿಗೆ ಅನುಮತಿ ನೀಡಲಾಗುತ್ತದೆ. ಈ ಮೂಲಕ ಜನನ ಮತ್ತು ಮರಣ ನೋಂದಣಿಯನ್ನು ನಿಗದಿತ ಅವಧಿಯೊಳಗೆ ಮಾಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.























