ಜೀವನಕ್ಕೆ ವಿದಾಯ ಹೇಳುವ ಜಾಗದಲ್ಲಿ ಜೋಡಿಯೊಂದು ಹೊಸ ಜೀವನದ ಹಾದಿ ತುಳಿದಿದ್ದಾರೆ. ಅಂದರೆ ಸ್ಮಶಾನದಲ್ಲಿ ಮದುವೆ ಕಾರ್ಯ ನಡೆದಿದೆ.
ಇದು ನಡೆದಿರುವುದು ಉತ್ತರಾಖಂಡದ ಅಲ್ಮೋರಾದಲ್ಲಿ.
ರಾಮಗಂಗಾ ಮತ್ತು ಬದನ್‌ಗಢ ನದಿಗಳ ಪವಿತ್ರ ಸಂಗಮ ಸ್ಥಳವದು. ಇದು ಆ ಭಾಗದ ಜನರ ನಂಬಿಕೆಯ ರುದ್ರಭೂಮಿ. ಆದರೆ ಈ ಸುಡುಗಾಡು ಮದುವೆ ಸಮಾರಂಭಕ್ಕೆ ಅಣಿಯಾಗಿತ್ತು. ಅದ್ದೂರಿ ಮಂಟಪ, ಹೂವಿನ ಅಲಂಕಾರ ಎಲ್ಲದರ ನಡುವೆ ಜೋಡಿ ಸತಿ – ಪತಿಗಳಾದರು.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಈ ಸಂಗಮ ಸ್ಥಳ ರಮಣೀಯ. ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರಿಗೆ ಸ್ಥಳದ ನೈಸರ್ಗಿಕ ಸೌಂದರ್ಯ ಇಷ್ಟವಾಯಿತು. ರೆಸಾರ್ಟ್ ಮ್ಯಾನೇಜರ್ ಅವರಲ್ಲಿ ತಮ್ಮ ಮನದಿಂಗಿತ ತಿಳಿಸಿದರು. ಇದು ಸ್ಮಶಾನ, ಇಲ್ಲಿ ಶುಭಕಾರ್ಯ ಬೇಡ ಎಂದರು ಮ್ಯಾನೇಜರ್ ರಾಕೇಶ್ ಶರ್ಮಾ. ಪ್ರವಾಸಿಗರ ಮೊಂಡು ಹಠವೇ ಮೇಲಾಯಿತು. ಮದುವೆ ನೆರವೇರಿತು.
ಈ ವಿವಾಹದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಸ್ಥಳೀಯರು ಪ್ರಶ್ನಿಸಿದರು. ಇದು ಬೆಟ್ಟದ ಸಂಸ್ಕೃತಿಗೆ (Pahari Culture)ಗೆ ವಿರುದ್ಧ ಎಂದು ಕೂಗಾಡಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ್ ಸಿಂಗ್ ರಾವತ್ ಸೇರಿದಂತೆ ಅನೇಕ ಗಣ್ಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ನದಿ ತೀರದ ಚಿತಾಗಾರಗಳಲ್ಲಿ ಯಾವುದೇ ಶುಭ ಕಾರ್ಯ ಮಾಡುವುದು ಅಶುಭ ಮತ್ತು ನಿಷಿದ್ಧ. ಇದು ಕೇವಲ ಒಂದು ಮದುವೆಯಲ್ಲ, ನಮ್ಮ ನಂಬಿಕೆಗೆ ಮಾಡಿದ ಅವಮಾನ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ನದಿ ತೀರದಲ್ಲಿ ಇಷ್ಟೊಂದು ಗದ್ದಲದ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ್ದರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಆಡಳಿತ ಎಚ್ಚೆತ್ತುಕೊಂಡಿದೆ. ತಹಶೀಲ್ದಾರ್ ಅಬಿದ್ ಅಲಿ ಅವರು ಪ್ರತಿಕ್ರಿಯಿಸಿ, ಯಾವುದೇ ಸಾರ್ವಜನಿಕ ಸ್ಥಳ ಅಥವಾ ಸ್ಮಶಾನದಲ್ಲಿ ಅನುಮತಿಯಿಲ್ಲದೆ ಖಾಸಗಿ ಕಾರ್ಯಕ್ರಮ ನಡೆಸುವುದು ಕಾನೂನುಬಾಹಿರ. ವೈರಲ್ ವೀಡಿಯೊ ಆಧರಿಸಿ ತನಿಖೆ ನಡೆಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.























