ಪುತ್ತೂರು: ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಜೊತೆಗೆ ಅನೇಕ ಅನೇಕ ಅವಕಾಶಗಳು ವಿದ್ಯಾರ್ಥಿಗಳ ಪಾಲಿಗೆ ದೊರೆಯುತ್ತಿದೆ. ಅದರಲ್ಲಿ ಕ್ರೀಡೆಯು ಒಂದಾಗಿದೆ. ಕ್ರೀಡೆಯಲ್ಲಿ ಸಹಕಾರ ಮನೋಭಾವನೆ ಬೆಳೆಯುತ್ತದೆ. ವಿದ್ಯಾರ್ಥಿಗಳು ಇಷ್ಟು ಮಾತ್ರವಲ್ಲ ಕ್ರೀಡೆಯ ಜೊತೆಗೆ ಭಾರತೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾಭಾರತಿ ಕರ್ನಾಟಕ ದ.ಕ. ಜಂಟಿಯಾಗಿ ಪುತ್ತೂರಿನ ಸಾಮೆತ್ತಡ್ಕದ ಸುದಾನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡಬೇಕು. ಕ್ರೀಡೆ ಮಕ್ಕಳಲ್ಲಿರುವ ಚೈತನ್ಯ ಶಕ್ತಿಯನ್ನು ಹೊರತೆಗೆಯುವ ಕಾರ್ಯ ಮಾಡುತ್ತದೆ. ಕ್ರೀಡೆಯ ಜೊತೆಗೆ ಭಾರತದ ಸಂಸ್ಕೃತಿ ಉಳಿಸಿ ಹಾಗೂ ಭಾರತದ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುವವರಾಗಬೇಕು ಎಂದರು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸೈನಿಕರು ಹಾಗೂ ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು – ಗೆಲುವು ಸಾಮಾನ್ಯ. ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಹಿರಿಯರಿಗೆ ಗೌರವ ಕೊಡುವ ಒಳ್ಳೆಯ ಗುಣ, ಶಿಸ್ತು, ಸಂಯಮ ಬೆಳೆಸಿಕೊಳ್ಳಬೇಕು. ಕಲಿಕೆಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭೀವೃದ್ಧಿ ಸಾಧ್ಯವಾಗುತ್ತದೆ. ಒಂದಲ್ಲಾ ಒಂದು ವಿಧಾನದಿಂದ ಎಲ್ಲರಿಗೂ ದೇಶಸೇವೆ ಮಾಡುವ ಅವಕಾಶ ಕೂಡಿ ಬರಲಿ ಎಂದರು.
ವೇದಿಕೆಯಲ್ಲಿ ಜಿಲ್ಲಾ ಶಾರೀರಿಕ್ ಪ್ರಮುಖ್ ಪುರುಷೋತ್ತಮ, ನೆಲ್ಲಿಕಟ್ಟೆ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ. ಎಸ್., ಮತ್ತು ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್, ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಬಾಲವರ್ಗದಲ್ಲಿ 9 ತಂಡಗಳು, ಕಿಶೋರ ವರ್ಗದಲ್ಲಿ 15 ತಂಡಗಳು ಹಾಗೂ ತರುಣ ವರ್ಗದಲ್ಲಿ 13 ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದ ತೀರ್ಪುಗಾರರಾಗಿ ಶಶಾಂಕ್ ಹಾಗೂ ಕೌಶಿಕ್ ಸಹಕರಿಸಿದರು.
ಅಂಬಿಕಾ ವಿದ್ಯಾಲಯದ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ವಿಜೇತರ ಪಟ್ಟಿಯನ್ನು ವಾಚಿಸಿದರು. ಆದಿಶ್ರೀ, ಅನುಶ್ರೀ, ಇಂಚರ, ಹೃನ್ಮಯಿ ಪ್ರಾರ್ಥಿಸಿದರು.
ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಫಲಿತಾಂಶ:
14 ವರ್ಷದ ಒಳಗಿನ (ಬಾಲ ವರ್ಗ) ಹುಡುಗರ ವಿಭಾಗದಲ್ಲಿ ಮಂಗಳೂರು ಶಾರದಾ ವಿದ್ಯಾಲಯ ಪ್ರಥಮ, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಸಿ.ಬಿ.ಎಸ್.ಇ. ವಿದ್ಯಾಲಯ ಪ್ರಥಮ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆಯಿತು.
17 ವರ್ಷದೊಳಗಿನ (ಕಿಶೋರ ವರ್ಗ) ಬಾಲಕರ ವಿಭಾಗದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಮಂಗಳೂರು ಶಾರದಾ ವಿದ್ಯಾಲಯ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯ ಪ್ರಥಮ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆಯಿತು.
19 ವರ್ಷದೊಳಗಿನ(ತರುಣವರ್ಗ) ಬಾಲಕರ ವಿಭಾಗದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಥಮ, ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಪುತ್ತೂರು, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜು ಪ್ರಥಮ, ಮಂಗಳೂರು ಶಾರದಾ ವಿದ್ಯಾನಿಕೇತನ ದ್ವಿತೀಯ ಸ್ಥಾನ ಗಳಿಸಿತು. ಸಮಾರೋಪ ಸಮಾರಂಭದಲ್ಲಿ ವಿದ್ಯಾ ಭಾರತಿ ಕ್ಷೇತ್ರೀಯ ನೈತಿಕ, ಆಧ್ಯಾತ್ಮಿಕ ಪ್ರಮುಖ್ ವೆಂಕಟ್ರಾಮಣ್ ರಾವ್ ಮಂಕುಡೆ ವಿಜೇತರಿಗೆ ಬಹುಮಾನ ವಿತರಿಸಿದರು.
























