ಪುತ್ತೂರು: ಸುದ್ದಿ ಮಾಧ್ಯಮದಲ್ಲಿ ಸದಾ ಹೊಸತನ ಇರಬೇಕು. ಜನರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಸ್ತುನಿಷ್ಠ ಹಾಗೂ ಸತ್ಯಾಧಾರಿತ ಸುದ್ದಿಗಳನ್ನು ನೀಡುವುದು ಪತ್ರಕರ್ತನ ಆದ್ಯ ಕರ್ತವ್ಯ. ಯಾವುದೇ ಒತ್ತಡಕ್ಕೂ ಮಣಿಯದೆ ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಹೊಸದಿಗಂತ ದಿನಪತ್ರಿಕೆಯ ಪ್ರಧಾನ ಸಂಪಾದಕ ಡಾ. ಪಿ.ಎಸ್. ಪ್ರಕಾಶ್ ಹೇಳಿದರು.
ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ಸ್‌ನಲ್ಲಿ ನಡೆದ ‘ನಿಮಿಷ ನ್ಯೂಸ್’ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆ ನೆರವೇರಿಸಿ ಅವರು ಮಾತನಾಡಿದರು.
ಪುತ್ತೂರು ಸುದ್ದಿಗಳ ಆಗರವಾಗಿದ್ದು, ಸತ್ಯ ಮತ್ತು ನ್ಯಾಯದೊಂದಿಗೆ ಮುನ್ನಡೆದರೆ ಯಶಸ್ಸು ಖಚಿತ. ಯುವಶಕ್ತಿ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಮನೆ, ಶಾಲೆ ಹಾಗೂ ಸಮಾಜವೂ ಸರಿಯಾದ ದಾರಿಯಲ್ಲಿ ಸಾಗಬೇಕು. ಇಂದಿನ ದಿನಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲೇ ಎಲ್ಲ ರೀತಿಯ ಮಾಹಿತಿ ಲಭ್ಯವಾಗುತ್ತಿದೆ. ಹೀಗಾಗಿ ಜನರಿಗೆ ಸಕಾರಾತ್ಮಕ ಹಾಗೂ ಉಪಯುಕ್ತ ವಿಷಯಗಳನ್ನು ತಲುಪಿಸುವುದು ನ್ಯೂಸ್ ಚಾನೆಲ್‌ಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಕ್ಯಾಂಪ್ಕೋದಂತಹ ವಿಶ್ವವಿಖ್ಯಾತ ಸಂಸ್ಥೆ ಪುತ್ತೂರಿನಲ್ಲಿ ಆರಂಭಗೊಂಡಿರುವುದು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪುತ್ತೂರಿಗರು ಉತ್ತಮ ಹೆಸರು ಗಳಿಸಿದ್ದಾರೆ. ಹಲವು ಹೊಸತನಗಳಿಗೆ ಈ ಊರಿನಲ್ಲಿ ಚಾಲನೆ ದೊರೆಯುತ್ತಿದ್ದು, ಇದೇ ಹಾದಿಯಲ್ಲಿ ‘ನಿಮಿಷ ನ್ಯೂಸ್’ ಆರಂಭವಾಗಿರುವುದು ಸ್ವಾಗತಾರ್ಹ. ಮಾಧ್ಯಮ ಯಾವುದೇ ಒತ್ತಡಕ್ಕೆ ಒಳಗಾಗದೆ ವಿಶ್ವವ್ಯಾಪಿ ಹೆಸರು ಗಳಿಸಲಿ ಎಂದು ಅವರು ಹಾರೈಸಿದರು.
ವೆಬ್‌ಸೈಟ್ ಉದ್ಘಾಟಿಸಿದ ಯು.ಆರ್. ಪ್ರಾಪರ್ಟೀಸ್ ಮಾಲಕ ಉಜ್ವಲ್ ಪ್ರಭು ಮಾತನಾಡಿ, ಕೆಲವು ಮಾಧ್ಯಮಗಳು ತಮ್ಮನ್ನು ತಾವು ಮಾರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬ್ಲಾಕ್‌ಮೇಲ್ ಜರ್ನಲಿಸಂ ಕೂಡ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ‘ಸಮಾಜದ ಸಮಯೋಚಿತ ವರದಿ’ ಎಂಬ ಧ್ಯೇಯವಾಕ್ಯದೊಂದಿಗೆ ‘ನಿಮಿಷ ನ್ಯೂಸ್’ ಸಮಾಜದ ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ವಸ್ತುನಿಷ್ಠ ವರದಿಯ ಮೂಲಕ ಈ ಮಾಧ್ಯಮ ದೇಶವ್ಯಾಪಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಆದರ್ಶ ಆಸ್ಪತ್ರೆಯ ವೈದ್ಯ ಡಾ. ಎಂ.ಕೆ. ಪ್ರಸಾದ್ ಮಾತನಾಡಿ, ಹಿಂದೆ ಸುದ್ದಿ ತಿಳಿಯಲು ದಿನಪತ್ರಿಕೆಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ ಇಂದು ಅಂಗೈಯಲ್ಲೇ ವಿವಿಧ ಮಾಧ್ಯಮಗಳು ಲಭ್ಯವಿವೆ. ಈ ಸಂದರ್ಭದಲ್ಲಿ ಮಾಧ್ಯಮಗಳು ದಿಕ್ಕು ತಪ್ಪದಂತೆ ಎಚ್ಚರ ವಹಿಸಬೇಕು. ‘ನಿಮಿಷ ನ್ಯೂಸ್’ ಸಕಾರಾತ್ಮಕ ವಿಚಾರಗಳಿಗೆ ಆದ್ಯತೆ ನೀಡಿ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂದರು.
ಸಮಾಜದ ನಕಾರಾತ್ಮಕ ವಿಚಾರಗಳಿಗೆ ಮಾತ್ರ ಧ್ವನಿಯಾಗದೆ, ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಂದೆ ತರುವ ಕಾರ್ಯವನ್ನು ಮಾಧ್ಯಮಗಳು ಮಾಡಬೇಕು. ಈ ನಿಟ್ಟಿನಲ್ಲಿ ‘ನಿಮಿಷ ನ್ಯೂಸ್’ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡುವಂತಾಗಲಿ ಎಂದು ಅವರು ಹೇಳಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮಾತನಾಡಿ, ಸತ್ಯ ಸಂಗತಿಗಳಿಗೆ ಆದ್ಯತೆ ನೀಡುವುದು ಪ್ರತಿಯೊಂದು ಮಾಧ್ಯಮದ ಕರ್ತವ್ಯ. ಬೆಳೆಯುತ್ತಿರುವ ಪುತ್ತೂರಿಗೆ ‘ನಿಮಿಷ ನ್ಯೂಸ್’ ಮತ್ತಷ್ಟು ಶೋಭೆ ತಂದಿದೆ. ಶೀಘ್ರದಲ್ಲೇ ಈ ಚಾನೆಲ್ ಸ್ಯಾಟ್‌ಲೈಟ್ ಮೂಲಕವೂ ಲಭ್ಯವಾಗುವಂತಾಗಲಿ ಎಂದು ಹಾರೈಸಿದರು.
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಾರದಾ ಭಜನಾ ಮಂಡಳಿ ಅಧ್ಯಕ್ಷ ಸೀತಾರಾಮ ಕೆದಂಬಾಡಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಗ್ರಾಮಾಂತರ ಮಂಡಳಿ ಅಧ್ಯಕ್ಷ ದಯಾನಂದ ಉಜಿರೆಮಾರು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಟವರ್ಸ್ ಮಾಲಕ ಅಮರನಾಥ ಗೌಡ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನ್ಮಥ ಶೆಟ್ಟಿ ಸ್ವಾಗತಿಸಿ ವಂದಿಸಿದರು. ರಿಷಿಕಾ ಪ್ರಾರ್ಥಿಸಿದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
























